16 ದಿನಗಳಲ್ಲಿ 58 ಚಾರ್ಧಾಮ್ ಯಾತ್ರಿಕರ ನಿಧನ

PC: NDTV
ಡೆಹ್ರಾಡೂನ್: ಈ ವರ್ಷ ಚಾರ್ಧಾಮ್ ಯಾತ್ರೆ ಆರಂಭಗೊಂಡ ಆನಂತರದ 16 ದಿನಗಳಲ್ಲಿ ಸುಮಾರು 58 ಯಾತ್ರಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಹೃದಯಾಘಾತದಿಂದಾಗಿ ಅಸುನೀಗಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡದ ಆರೋಗ್ಯ ಇಲಾಖೆಯು ಚಾರ್ಧಾಮ್ ಯಾತ್ರಿಕರ ಆರೋಗ್ಯದ ಬಗ್ಗೆ ಅತ್ಯಂತ ಕಟ್ಟುನಿಟ್ಟಿನ ತಪಾಸಣೆಯನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ.
ಅಧಿಕೃತ ವರದಿಗಳ ಪ್ರಕಾರ, ಚಾರ್ಧಾಮ್ ಯಾತ್ರೆ ಆರಂಭಗೊಂಡ ಆನಂತರ 16ದಿನಗಳೊಳಗೆ 58 ಯಾತ್ರಿಕರು ಅಸುನೀಗಿದ್ದಾರೆ. ಅವರಲ್ಲಿ 40 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಮೃತರಲ್ಲಿ 47 ಮಂದಿ ಹೃದಯಾಘಾತ ಹಾಗೂ ಪಲ್ಮನರಿ ಎಡಿಮಾ (ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು)ದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2023ರಲ್ಲಿ ಚಾರ್ಧಾಮ ಯಾತ್ರೆಯ ಸಂದರ್ಭ 250 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, ಅದರ ಅನುಪಾತವು ಪ್ರತಿ ಒಂದು ಲಕ್ಷಕ್ಕೆ 4.5 ಆಗಿತ್ತು. ಆದರೆ 2022ರಲ್ಲಿ ಚಾರ್ದಾಮ್ ಯಾತ್ರೆ ವೇಳೆ ಮೃತಪಟ್ಟ ಯಾತ್ರಿಕರ ಅನುಪಾತವು ಇದಕ್ಕಿಂತಲೂ ಅಧಿಕವಾಗಿದ್ದು, ಪ್ರತಿ ಒಂದು ಲಕ್ಷಕ್ಕೆ 7.5 ಆಗಿದೆ.





