ಉತ್ತರ ಪ್ರದೇಶ | ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಿಕೆ ಕುಸಿದು ಆರು ಮಂದಿ ಮೃತ್ಯು, 50 ಮಂದಿಗೆ ಗಾಯ

Photo credit: ANI
ಬಾಘ್ಪಟ್: ಉತ್ತರ ಪ್ರದೇಶದ ಬಾಗ್ಫಟ್ ನಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬಿದಿರಿನಿಂದ ನಿರ್ಮಿಸಲಾಗಿದ್ದ ವೇದಿಕೆಯು ಜನರ ಭಾರಕ್ಕೆ ಕುಸಿದು 6 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಇಂದು ಬರೌತ್ ನ ಜೈನ ಸಮುದಾಯವು ಲಡ್ಡೂ ಮಹೋತ್ಸವವನ್ನು ಆಯೋಜಿಸಿತ್ತು ಹಾಗೂ ಲಡ್ಡೂ ಸಮರ್ಪಿಸಲು ನೂರಾರು ಮಂದಿ ದೇವಾಲಯಕ್ಕೆ ಧಾವಿಸಿದ್ದರು. ಭಕ್ತರಿಗಾಗಿ ಬಿದಿರು ವೇದಿಕೆಯನ್ನು ನಿರ್ಮಿಸಲಾಗಿತ್ತು. ಆದರೆ, ಆ ಬಿದಿರು ವೇದಿಕೆಯು ಜನರ ಭಾರಕ್ಕೆ ಕುಸಿದು ಬಿದ್ದಿದೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಆ್ಯಂಬುಲೆನ್ಸ್, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದವು. ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ ಪ್ರಥಮ ಚಿಕಿತ್ಸೆ ನೀಡಿ, ಮನೆಗೆ ಕಳಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಾಘ್ಪಟ್ ಪೊಲೀಸ್ ಮುಖ್ಯಸ್ಥ ಅರ್ಪಿತ್ ವಿಜಯ್ ವರ್ಗೀಯ ತಿಳಿಸಿದ್ದಾರೆ.
ಕಳೆದ 30 ವರ್ಷಗಳಿಂದ ಜೈನ ಸಮುದಾಯವು ಲಡ್ಡೂ ಮಹೋತ್ಸವವನ್ನು ಆಚರಿಸುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಮರದ ಚೌಕಟ್ಟು ಕುಸಿದು ಬಿದ್ದು, ಸುಮಾರು 40 ಮಂದಿ ಗಾಯಗೊಂಡರು. 20 ಮಂದಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಮನೆಗೆ ಕಳಿಸಲಾಗಿದ್ದು, ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಸ್ಮಿತಾ ಲಾಲ್ ಹೇಳಿದ್ದಾರೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ಆತಂಕ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಧಾವಿಸಿ, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಪ್ರಾರ್ಥಿಸಿದ್ದಾರೆ ಎಂದೂ ಅವರ ಕಚೇರಿ ತಿಳಿಸಿದೆ.







