ಈ ವರ್ಷ ವಿಮಾನದ ಎಂಜಿನ್ ಸ್ಥಗಿತಗೊಂಡ 6 ಘಟನೆ ವರದಿ: ಡಿಜಿಸಿಎ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ, ಜು. 5: ಈ ವರ್ಷ ಇದುವರೆಗೆ ವಿಮಾನ ಎಂಜಿನ್ ಸ್ಥಗಿತಗೊಂಡ ಒಟ್ಟು 6 ಘಟನೆಗಳು ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ 3 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತಿಳಿಸಿದೆ.
ನಾಗರಿಕ ವಿಮಾನ ಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮಹೋಲ್ ಅವರು ರಾಜ್ಯಸಭೆಯೊಂದಿಗೆ ಹಂಚಿಕೊಂಡ ದತ್ತಾಂಶದ ಪ್ರಕಾರ, ಇಂಡಿಗೊ ಹಾಗೂ ಸ್ಪೈಸ್ಜೆಟ್ನಲ್ಲಿ ಎಂಜಿನ್ ಸ್ಥಗಿತಗೊಂಡ 2 ಘಟನೆಗಳು ನಡೆದಿವೆ, ಏರ್ ಇಂಡಿಯಾ ಹಾಗೂ ಅಲಿಯನ್ಸ್ ಏರ್ನಲ್ಲಿ ಇಂತಹ ತಲಾ 1 ಘಟನೆ ನಡೆದಿವೆ.
ಜೂನ್ 12ರಂದು ಅಹ್ಮದಾಬಾದ್ನಿಂದ ಹಾರಾಟ ಆರಂಭಿಸಿದ ಕೂಡಲೇ ಕಟ್ಟಡವೊಂದಕ್ಕೆ ಢಿಕ್ಕಿಯಾದ ಲಂಡನ್ ನ ಗಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನ ಎಐ 171 ಸೇರಿದಂತೆ ತುರ್ತು ಪರಿಸ್ಥಿತಿ ಘೋಷಿಸಲಾದ 3 ಘಟನೆಗಳು ನಡೆದಿವೆ.
ಇಂಡಿಗೊ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಕೂಡ ತುರ್ತು ಪರಿಸ್ಥಿತಿ ಘೋಷಣೆಯ ತಲಾ ಒಂದು ಘಟನೆ ನಡೆದಿದೆ.
‘‘2025ರಲ್ಲಿ ಜನವರಿಯಿಂದ ಜುಲೈ ವರೆಗೆ (ಇಂದಿನ ದಿನಾಂಕದ ವರೆಗೆ) ಒಟ್ಟು ವಿಮಾನ ಎಂಜಿನ್ ಸ್ಥಗಿತಗೊಂಡ 6 ಘಟನೆಗಳು ಹಾಗೂ ಒಟ್ಟು ತುರ್ತು ಪರಿಸ್ಥಿತಿ ಘೋಷಿಸಿದ 3 ಘಟನೆಗಳು ವರದಿಯಾಗಿವೆ’’ ಎಂದು ಮಹೋಲ್ ಸೋಮವಾರ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ ವಾಸ್ತವಿಕ ಮಾಹಿತಿಯ ಆಧಾರದಲ್ಲಿ ಜುಲೈ 12ರಂದು ಪ್ರಕಟವಾದ ವಿಮಾನ ಅಪಘಾತ ತನಿಖಾ ಬ್ಯುರೋದ ಪ್ರಾಥಮಿಕ ವರದಿ ಏರ್ ಇಂಡಿಯಾ ಪತನದ ಕುರಿತು ಯಾವುದೇ ತೀರ್ಮಾನವನ್ನು ಹೊಂದಿಲ್ಲ. ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಪ್ರತ್ಯೇಕ ಲಿಖಿತ ಪ್ರತಿಕ್ರಿಯೆಯಲ್ಲಿ ಅವರು ತಿಳಿಸಿದ್ದಾರೆ.







