ಮಧ್ಯಪ್ರದೇಶ | ಟೆಂಪೋ ಟ್ರಾವೆಲ್ಲರ್ ಅಪಘಾತ : ಬೆಳಗಾವಿಯ ಯಾತ್ರಿಗಳು ಸೇರಿದಂತೆ 6 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಇಂದೋರ್ : ಮಧ್ಯಪ್ರದೇಶದ ಮಾಣಪುರದಲ್ಲಿ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಕರ್ನಾಟಕದ ಬೆಳಗಾವಿಯ ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲ್ಲರ್ ವೊಂದು ಬೈಕ್ ಮತ್ತು ಟ್ಯಾಂಕರ್ ಗೆ ಢಿಕ್ಕಿ ಹೊಡೆದ ಪರಿಣಾಮ ಆರು ಜನರು ಮೃತಪಟ್ಟಿದ್ದು, ಇತರ 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಬೆಳಗಾವಿಯ ನಿವಾಸಿಗಳು ಟೆಂಪೋ ಟ್ರಾವೆಲ್ಲರ್ ನಲ್ಲಿ ವಾಪಾಸ್ಸು ಮಹಾಕುಂಭ ಮೇಳಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತದ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಇನ್ನಿಬ್ಬರು ಇಂದೋರ್ ನ ಎಂವೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 17 ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಾಗರ್(65), ನೀತು(50) ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಮಗುವೊಂದನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಅಪಘಾತದಲ್ಲಿ ಮೃತರಾದ ಸಾಗರ್(65), ನೀತು(50) ಕರ್ನಾಟಕದ ಬೆಳಗಾವಿಯ ಮೂಲದವರು ಎಂದು ಹೇಳಲಾಗಿದೆ. ಬೈಕ್ ನಲ್ಲಿದ್ದ ಹಿಮಾಂಶು ಮತ್ತು ಶುಭಂ ಎಂಬವರು ಮಧ್ಯಪ್ರದೇಶದ ಇಂದೋರ್ ನ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28







