ತಮಿಳುನಾಡು | ಶಾಲೆಯಲ್ಲಿ ದಲಿತ ಮಹಿಳೆಗೆ ಅಡುಗೆ ಮಾಡಲು ಅಡ್ಡಿ: ಆರು ಮಂದಿಗೆ ಶಿಕ್ಷೆ

ಸಾಂದರ್ಭಿಕ ಚಿತ್ರ
ತಿರುಪ್ಪೂರ್: 2018ರಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಅಡುಗೆ ತಯಾರಿಸಲು ದಲಿತ ಮಹಿಳೆಯೊಬ್ಬರಿಗೆ ಅಡ್ಡಿಪಡಿಸಿದ್ದ ಆರೋಪದ ಮೇಲೆ ತಿರುಪ್ಪೂರ್ ವಿಶೇಷ ನ್ಯಾಯಾಲಯವೊಂದು ಆರು ಮಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಪಿ.ಪಳನಿಸ್ವಾಮಿ ಗೌಂಡರ್, ಎನ್.ಶಕ್ತಿವೇಲ್, ಆರ್.ಷಣ್ಮುಗಂ, ಸಿ.ವೆಲ್ಲಿಂಗಿರಿ, ಎ.ದುರೈಸ್ವಾಮಿ ಹಾಗೂ ವಿ.ಸೀತಾಲಕ್ಷ್ಮಿ ಎಂಬ ಆರೋಪಿಗಳಿಗೆ ಜಾತಿ ತಾರತಮ್ಯ ಹಾಗೂ ಇನ್ನಿತರ ಸಂಬಂಧಿತ ಅಪರಾಧಗಳಿಗಾಗಿ ಈ ಶಿಕ್ಷೆ ವಿಧಿಸಿದೆ.
ತಿರುಮಲೈಗೌಂಡಂಪಾಳ್ಯಂನಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ.ಪಪ್ಪಲ್ ಎಂಬ 44 ವರ್ಷದ ದಲಿತ ಮಹಿಳೆಯೊಂದಿಗೆ ಜಾತಿ ತಾರತಮ್ಯ ಪ್ರದರ್ಶಿಸಿದ್ದ ಈ ಆರು ಮಂದಿ ಆರೋಪಿಗಳು, ತಮ್ಮ ಮಕ್ಕಳಿಗೆ ಅಡುಗೆ ತಯಾರಿಸದಂತೆ ಆಕೆಗೆ ಅಡ್ಡಿ ಪಡಿಸಿದ್ದರು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯದೆದುರು ವಾದ ಮಂಡಿಸಿದ್ದರು.
ಈ ಘಟನೆಯ ವಿರುದ್ಧ ತಮಿಳುನಾಡು ಅಸ್ಪೃಶ್ಯಾತಾಚರಣೆ ನಿರ್ಮೂಲನಾ ರಂಗ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಇದರ ಬೆನ್ನಿಗೇ ಪಪ್ಪಲ್ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿತ್ತು.
ಬಳಿಕ, ಆಕೆಯ ಪರವಾಗಿ 2018ರ ಜುಲೈ ತಿಂಗಳಲ್ಲಿ ದೂರೊಂದು ದಾಖಲಾಗಿತ್ತು. ಈ ದೂರನ್ನು ಆಧರಿಸಿ, ಚೆಯೂರ್ ಠಾಣಾ ಪೊಲೀಸರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ 35 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಂಟು ಮಂದಿಯನ್ನು ಬಂಧಿಸಿದ್ದರು.
ಶುಕ್ರವಾರ ನಡೆದ ವಿಚಾರಣೆಯ ವೇಳೆ ಆರು ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂ.ಸುರೇಶ್, ಆರೋಪಿಗಳಿಗೆ ತಲಾ 5,000 ರೂ. ದಂಡವನ್ನೂ ವಿಧಿಸಿದರು. ಇದೇ ವೇಳೆ, ಸಾಕ್ಷ್ಯಾಧಾರದ ಕೊರತೆಯಿಂದ 25 ಮಂದಿಯನ್ನು ಖುಲಾಸೆಗೊಳಿಸಿದರು. ಇನ್ನುಳಿದ ನಾಲ್ವರು ಆರೋಪಿಗಳು ವಿಚಾರಣಾ ಅವಧಿಯ ನಡುವೆಯೇ ಮೃತಪಟ್ಟಿದ್ದರು. ಅಂದಿನಿಂದ ಅಪರಾಧಿಗಳೆಂದು ಘೋಷಿತವಾಗಿರುವ ಆರು ಮಂದಿಯನ್ನು ಕೊಯಂಬತ್ತೂರು ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.







