ನಿಕರಾಗುವ ವಿಮಾನದಲ್ಲಿದ್ದ ಗುಜರಾತ್ ಪ್ರಯಾಣಿಕರು ಅಕ್ರಮವಾಗಿ ಅಮೆರಿಕ ಪ್ರವೇಶಕ್ಕೆ 60-80 ಲಕ್ಷ ರೂ. ಪಾವತಿಸಿದ್ದರು!
ಹೊಸದಿಲ್ಲಿ: ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಫ್ರಾನ್ಸ್‌ನಿಂದ ವಾಪಸ್ ಕಳುಹಿಸಲಾಗಿದ್ದ ನಿಕರಾಗುವಾಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 66 ಮಂದಿ ಗುಜರಾತ್ ನವರಾಗಿದ್ದು, ಅಮೆರಿಕಕ್ಕೆ ಅಕ್ರಮವಾಗಿ ದಾಟಲು ವಲಸೆ ಏಜೆಂಟ್‌ಗಳಿಗೆ 60-80 ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡಿದ್ದರು ಎಂದು ಗುಜರಾತ್ ನ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ತಿಳಿಸಿದ್ದಾರೆ ವರದಿ ಮಾಡಿದೆ.
ದುಬೈನಿಂದ ನಿಕರಾಗುವಾಗೆ ಹೊರಟಿದ್ದ ವಿಮಾನದಲ್ಲಿ 303 ಪ್ರಯಾಣಿಕರಿದ್ದರು. ಅವರನ್ನು ಮಾನವ ಕಳ್ಳಸಾಗಣೆಯ ಅನುಮಾನದ ಮೇಲೆ ಅಧಿಕಾರಿಗಳು ಡಿ. 21 ರಂದು ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಪ್ರಯಾಣಿಕರನ್ನು ಅಲ್ಲಿನ ಅಧಿಕಾರಿಗಳು ಪ್ರಶ್ನಿಸಿದ ನಂತರ, ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಡಿ. 26 ರಂದು ವಿಮಾನ ಮುಂಬೈಗೆ ಬಂದಿಳಿಯಿತು.
ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ 27 ಜನರು ಫ್ರಾನ್ಸ್‌ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಲು ಇಚ್ಛಿಸಿದ್ದರಿಂದ, 303 ಪ್ರಯಾಣಿಕರ ಪೈಕಿ 276 ಮಂದಿ ಮಾತ್ರ ಮುಂಬೈಗೆ ಮರಳಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸ್ ಅಧೀಕ್ಷಕ ಸಂಜಯ್ ಖರತ್ ಅವರು, ಕೆಲವು ಅಪ್ರಾಪ್ತ ವಯಸ್ಕರು ಸೇರಿದಂತೆ 66 ಗುಜರಾತ್ ಮೂಲದವರು ವಿಮಾನದಲ್ಲಿದ್ದರು. ಅವರೆಲಾ ಮೆಹ್ಸಾನಾ, ಅಹಮದಾಬಾದ್, ಗಾಂಧಿನಗರ ಮತ್ತು ಆನಂದ್ ಜಿಲ್ಲೆಗಳವರು ಎಂದು ಮಂಗಳವಾರ ಹೇಳಿದ್ದಾರೆ.
"ನಾವು ಈಗಾಗಲೇ ಅವರಲ್ಲಿ 55 ಮಂದಿಯನ್ನು ವಿಚಾರಣೆಗೊಳಪಡಿಸಿದ್ದೇವೆ ಮತ್ತು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಅವರಲ್ಲಿ ಹೆಚ್ಚಿನವರು 8 ರಿಂದ 12 ನೇ ತರಗತಿಯವರೆಗೆ ಓದಿದ್ದಾರೆ. ಪ್ರತಿಯೊಬ್ಬರೂ ದುಬೈ ಮೂಲಕ ನಿಕರಾಗುವಾ ತಲುಪಿದ ನಂತರ ಅಕ್ರಮವಾಗಿ ಅಮೆರಿಕ ಗಡಿ ದಾಟಲು ಸಹಾಯ ಮಾಡಲು ಸ್ಥಳೀಯ ವಲಸೆ ಏಜೆಂಟರಿಗೆ 60 ಲಕ್ಷದಿಂದ 80 ಲಕ್ಷ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡರು" ಎಂದು ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ತನಿಖಾ ಸಂಸ್ಥೆಯು ಸುಮಾರು 15 ಏಜೆಂಟರ ಹೆಸರುಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಪಡೆದುಕೊಂಡಿದೆ. ಅವರು ಈ 55 ಜನರಿಗೆ ಮೆಕ್ಸಿಕೋ ಗಡಿಯ ಮೂಲಕ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಸಹಾಯ ಮಾಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಅಕ್ರಮ ವಲಸಿಗರು ಅಮೆರಿಕ ಪ್ರವೇಶಿಸಿದ ನಂತರವೇ ಹಣವನ್ನು ಪಾವತಿಸುವ ಒಪ್ಪಂದವಾಗಿತ್ತು ಎಂದು ತಿಳಿದು ಬಂದಿದೆ.
"ಏಜೆಂಟರು ಪ್ರಯಾಣಿಕರಿಗೆ ತಮ್ಮ ತಂಡದ ಸದಸ್ಯರು ನಿಕರಾಗುವಾದಿಂದ ಅಮೆರಿಕ ಗಡಿಗೆ ಕರೆದೊಯ್ಯುತ್ತಾರೆ, ನಂತರ ಗಡಿ ದಾಟಲು ಸಹಾಯ ಮಾಡುತ್ತಾರೆ ಎಂದು ಹೇಳಿದ್ದರು. ಏಜೆಂಟರು ಈ ಪ್ರಯಾಣಿಕರಿಗೆ ಯಾವುದೇ ತುರ್ತು ಪರಿಸ್ಥಿತಿ ನಿಭಾಯಿಸಲು ಸಹಾಯವಾಗುವಂತೆ ಒಂದು ಸಾವಿರ ದಿಂದ 3 ಸಾವಿರ ಡಾಲರ್(83,300 ರೂ.ನಿಂದ 2.5 ಲಕ್ಷ ರೂ.) ಮೌಲ್ಯದ ವಿಮಾನ ಟಿಕೆಟ್‌ಗಳನ್ನೂ ಕಾಯ್ದಿರಿಸಿದ್ದರು” ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏಜೆಂಟರು ರೂಪಿಸಿದ ಯೋಜನೆಯ ಪ್ರಕಾರ, 66 ಪ್ರಯಾಣಿಕರು ಡಿ.10 ಮತ್ತು 20 ರ ನಡುವೆ ಅಹಮದಾಬಾದ್, ಮುಂಬೈ ಮತ್ತು ದೆಹಲಿಯಿಂದ ದುಬೈ ತಲುಪಿದರು. ನಂತರ, ಅವರು ಏಜೆಂಟರ ನಿರ್ದೇಶನದ ಮೇರೆಗೆ ದುಬೈನಲ್ಲಿ ನಿಕರಾಗುವಾಗೆ ಹೋಗುವ ವಿಮಾನವನ್ನು ಏರಿದರು ಎಂದು ಸಿಐಡಿ ಪ್ರಕಟಣೆ ತಿಳಿಸಿದೆ.
ಈ 55 ಪ್ರಯಾಣಿಕರ ದುಬೈ ವೀಸಾ ಪಡೆದ ಏಜೆಂಟ್‌ಗಳು, ಅವರ ಖಾತೆಯಿಂದ ವೀಸಾ ಶುಲ್ಕ ಪಾವತಿಸಿದ ಏಜೆಂಟರ ಬ್ಯಾಂಕ್ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡುವಂತೆ ಸಿಐಡಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪತ್ರ ಬರೆದಿದೆ. ಏಜೆಂಟರು ದುಬೈನಿಂದ ನಿಕರಾಗುವಾ ವೀಸಾವನ್ನು ಪಡೆದುಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು? ಅವರು ದುಬೈನಿಂದ ಹೇಗೆ ವಿಮಾನವನ್ನು ಬುಕ್ ಮಾಡಿದರು? ಪ್ರಯಾಣಿಕರ ಟಿಕೆಟ್‌ಗಳಿಗೆ ಹಣವನ್ನು ಹೇಗೆ ಪಾವತಿಸಿದರು? ಎನ್ನುವ ಕುರಿತೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ನಿಕರಾಗುವಾ ಅಮೆರಿಕದಲ್ಲಿ ಆಶ್ರಯ ಪಡೆಯುವವರಿಗೆ ಜನಪ್ರಿಯ ತಾಣವಾಗಿದೆ. ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪೆಟ್ರೋಲ್ (ಸಿಬಿಪಿ) ದ ಮಾಹಿತಿಯ ಪ್ರಕಾರ, 2023 ರ ಹಣಕಾಸು ವರ್ಷದಲ್ಲಿ 96,917 ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಇವರಲ್ಲಿ ಕನಿಷ್ಠ 41,770 ಜನರು ಮೆಕ್ಸಿಕನ್ ಭೂ ಗಡಿಯ ಮೂಲಕ ಅಮೆರಿಕ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಡೇಟಾ ತೋರಿಸಿದೆ.