ಪ್ರಸಾರ ನಿಯಂತ್ರಕ NBDSA ಆದೇಶಗಳ ಪೈಕಿ ಶೇ.60 ಕೋಮು ಸೌಹಾರ್ದ ಉಲ್ಲಂಘನೆಗೆ ಸಂಬಂಧಿಸಿದ್ದು: ವರದಿ

PC: indianexpress
ಹೊಸದಿಲ್ಲಿ, ಜ.22: ಕಳೆದ ಮೂರು ವರ್ಷಗಳಲ್ಲಿ ಖಾಸಗಿ ದೂರದರ್ಶನ ಹಾಗೂ ಡಿಜಿಟಲ್ ಸುದ್ದಿ ವಾಹಿನಿಗಳ ಮೇಲ್ವಿಚಾರಣೆಗೆ ಸ್ಥಾಪಿತವಾಗಿರುವ ಭಾರತದ ಸ್ವಯಂ–ನಿಯಂತ್ರಣ ವ್ಯವಸ್ಥೆ ಹೊರಡಿಸಿದ ಆದೇಶಗಳ ಪೈಕಿ ಸುಮಾರು ಶೇ.60 ಆದೇಶಗಳು ಕೋಮು ಸೌಹಾರ್ದತೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆಗಳೇ ಆಗಿವೆ ಎಂದು ಅಧಿಕೃತ ದಾಖಲೆಗಳ ವಿಶ್ಲೇಷಣೆ ತಿಳಿಸಿದೆ.
ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಂಡ್ ಡಿಜಿಟಲ್ ಅಸೋಸಿಯೇಷನ್ (NBDA) ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆಯಾದ ನ್ಯೂಸ್ ಬ್ರಾಡ್ಕಾಸ್ಟಿಂಗ್ ಅಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ (NBDSA) 2023ರ ಜನವರಿ 1ರಿಂದ 2025ರ ಡಿಸೆಂಬರ್ 31ರವರೆಗೆ ಒಟ್ಟು 54 ಆದೇಶಗಳನ್ನು ಹೊರಡಿಸಿದೆ. ನೈತಿಕ ಸಂಹಿತೆ ಹಾಗೂ ಪ್ರಸಾರ ಮಾರ್ಗಸೂಚಿಗಳ ಉಲ್ಲಂಘನೆಗಾಗಿ 43 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇವುಗಳಲ್ಲಿ 32 ಪ್ರಕರಣಗಳು ನೇರವಾಗಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಷಯಗಳಿಗೆ ಸಂಬಂಧಿಸಿದ್ದವೆಂದು ದಾಖಲೆಗಳು ಸೂಚಿಸುತ್ತವೆ.
ವಿಶ್ಲೇಷಣೆಯ ಪ್ರಕಾರ, ಹಲವು ಸುದ್ದಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ರೂಢಿಬದ್ಧ ಕಲ್ಪನೆಗಳು ಮತ್ತು ಪ್ರಚೋದನಾತ್ಮಕ ಪದಪ್ರಯೋಗಗಳು ವ್ಯಾಪಕವಾಗಿ ಬಳಸಲಾಗಿದೆ. “ಲವ್ ಜಿಹಾದ್”, “ಲ್ಯಾಂಡ್ ಜಿಹಾದ್”, “ಥೂಕ್ ಜಿಹಾದ್” ಎಂಬ ಪದಗಳನ್ನು ಪದೇಪದೇ ಬಳಸಿ ಅಂತರಧರ್ಮೀಯ ಸಂಬಂಧಗಳು, ಭೂ ವಿವಾದಗಳು, ಆಹಾರ ಸ್ವಚ್ಛತೆ ಹಾಗೂ ಅಪರಾಧ ಪ್ರಕರಣಗಳನ್ನು ನಿರ್ದಿಷ್ಟ ಸಮುದಾಯಗಳ ವಿರುದ್ಧ ಚೌಕಟ್ಟುಗೊಳಿಸಿರುವ ಉದಾಹರಣೆಗಳು ಕಂಡುಬಂದಿವೆ. ಆಯ್ದ ಅಂಕಿ–ಅಂಶಗಳು ಅಥವಾ ಪರಿಶೀಲಿಸದ ಆರೋಪಗಳ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ನಕಾರಾತ್ಮಕವಾಗಿ ಚಿತ್ರಿಸಿರುವುದೂ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ವಿವಾದಾತ್ಮಕ ವಿಷಯಗಳನ್ನು ತೆರವುಗೊಳಿಸುವುದೇ ನಿಯಂತ್ರಕ ಸಂಸ್ಥೆಯ ಪ್ರಮುಖ ಕ್ರಮವಾಗಿದೆ. 37 ಪ್ರಕರಣಗಳಲ್ಲಿ ಪ್ರಸಾರಕರಿಗೆ ವಿವಾದಿತ ವಿಷಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ತಮ್ಮ ವೇದಿಕೆಗಳಿಂದ ತೆಗೆದುಹಾಕುವಂತೆ ನಿರ್ದೇಶನ ನೀಡಲಾಗಿದೆ. ನಿಯಮಾವಳಿಗಳಲ್ಲಿ ಆರ್ಥಿಕ ದಂಡ ವಿಧಿಸುವ ಅವಕಾಶ ಇದ್ದರೂ, ಕೇವಲ ಆರು ಪ್ರಕರಣಗಳಲ್ಲಿ ಮಾತ್ರ ದಂಡ ವಿಧಿಸಲಾಗಿದ್ದು, ಮೂರು ವರ್ಷಗಳಲ್ಲಿ ಒಟ್ಟು ದಂಡ ಮೊತ್ತ ರೂ.3.2 ಲಕ್ಷಕ್ಕೆ ಸೀಮಿತವಾಗಿದೆ. 2025ರಲ್ಲಿ ಹೊರಡಿಸಲಾದ 19 ಆದೇಶಗಳಲ್ಲಿ ಯಾವುದೇ ದಂಡ ವಿಧಿಸಲಾಗಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.
ದೂರು ಸಲ್ಲಿಕೆಯಾದ ಬಳಿಕ ಅಂತಿಮ ಆದೇಶ ಹೊರಬರುವವರೆಗೆ ಸರಾಸರಿ 11ರಿಂದ 12 ತಿಂಗಳುಗಳ ವಿಳಂಬವಾಗಿರುವುದೂ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ. ಈ ಅವಧಿಯಲ್ಲಿ ವಿವಾದಿತ ವಿಷಯಗಳು ಸಾರ್ವಜನಿಕವಾಗಿ ಲಭ್ಯವಾಗಿಯೇ ಉಳಿದಿದ್ದವು ಎಂದು ದಾಖಲೆಗಳು ಸೂಚಿಸುತ್ತವೆ.
ಅಧಿಕ ಸಂಖ್ಯೆಯ ಆದೇಶಗಳು Times Now, Navbharat ಸಂಸ್ಥೆಗೆ ಲಭಿಸಿದ್ದು, ವಿಷಯ ತೆರವುಗೊಳಿಸುವ ಸಂಬಂಧ 16 ನಿರ್ದೇಶನಗಳನ್ನು ಪಡೆದಿದೆ. ನಂತರದ ಸ್ಥಾನಗಳಲ್ಲಿ ನ್ಯೂಸ್ 18 ಇಂಡಿಯಾ ಮತ್ತು ಝೀ ನ್ಯೂಸ್ ಇದ್ದವು. ಅಂತರಧರ್ಮೀಯ ವಿವಾಹಗಳನ್ನು ನಿರಾಧಾರ ಆರೋಪಗಳ ಆಧಾರದಲ್ಲಿ “ಲವ್ ಜಿಹಾದ್” ಎಂದು ಸಾಮಾನ್ಯೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಟೈಮ್ಸ್ ನೌ ನವಭಾರತ್ಗೆ ರೂ.1 ಲಕ್ಷ ದಂಡ ವಿಧಿಸಲಾಗಿದೆ.
ಭಾರತದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಅಧ್ಯಕ್ಷತೆಯಲ್ಲಿರುವ NBDSA, ತೀರ್ಪು ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಸಹಮತದ ಆಧಾರದ ಮೇಲೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಸೀಮಿತ ದಂಡ ಮೊತ್ತಗಳು ಮತ್ತು ದೀರ್ಘಾವಧಿಯ ಪ್ರಕ್ರಿಯೆಗಳು ಸ್ವಯಂ–ನಿಯಂತ್ರಿತ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಕುಂದಿಸುತ್ತಿದ್ದು, ಅದರ ತಡೆಯುವ ಶಕ್ತಿಯನ್ನು ಕ್ಷೀಣಿಸುತ್ತಿವೆ ಎಂದು ಮಾಧ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.







