ಮುಂಬೈ: ಕ್ಯಾನ್ಸರ್ ಪೀಡಿತ ವೃದ್ಧೆಯನ್ನು ಕಸದ ರಾಶಿಯಲ್ಲಿ ಎಸೆದ ಮೊಮ್ಮಗ!

Image Source : India TV
ಮುಂಬೈ: ಚರ್ಮದ ಕ್ಯಾನ್ಸರ್ ನಿಂದ ನರಳುತ್ತಿರುವ 60ರ ಹರೆಯದ ಮಹಿಳೆಯೋರ್ವರನ್ನು ಮುಂಬೈನ ಆರೆ ಕಾಲನಿಯಲ್ಲಿನ ಕಸದ ರಾಶಿಯಲ್ಲಿ ತೊರೆದು ಹೋಗಿರುವ ಅತ್ಯಂತ ಕ್ರೂರ ಘಟನೆಯು ವರದಿಯಾಗಿದೆ.
ಮಹಿಳೆಯ ಸ್ವಂತ ಮೊಮ್ಮಗನೇ ಆಕೆಯನ್ನು ಕಸದ ರಾಶಿಯಲ್ಲೆಸೆದು ಹೋಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 8:30ರ ಸುಮಾರಿಗೆ ಕಸದ ರಾಶಿಯಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡವರು ಪೋಲಿಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಪೋಲಿಸರು ಸ್ಥಳಕ್ಕೆ ಧಾವಿಸಿದಾಗ ರಾತ್ರಿಯುಡುಪು ಧರಿಸಿದ್ದ ಯಶೋದಾ ಗಾಯಕ್ವಾಡ್ ಎಂಬ ದುರ್ಬಲ ಶರೀರದ ಮಹಿಳೆ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಕಂಡುಬಂದಿತ್ತು. ಚರ್ಮದ ಕ್ಯಾನ್ಸರ್ ನಿಂದ ಆಕೆಯ ಮುಖದಲ್ಲಿ ಗಾಯಗಳಾಗಿದ್ದು,ಅದಕ್ಕೆ ಚಿಕಿತ್ಸೆಯನ್ನೂ ಕೊಡಿಸಿರಲಿಲ್ಲ ಮತ್ತು ಕೆನ್ನೆಗಳು ಹಾಗೂ ಮೂಗಿನ ಮೇಲೆ ಸೋಂಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು.
‘ನಾನು ಮಲಾಡ್ನಲ್ಲಿ ಮೊಮ್ಮಗನೊಂದಿಗೆ ವಾಸವಾಗಿದ್ದು,ಆತ ನನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ’ ಎಂದು ಯಶೋದಾ ಕ್ಷೀಣ ಧ್ವನಿಯಲ್ಲಿ ಪೋಲಿಸರಿಗೆ ತಿಳಿಸಿದರು.
ಪೋಲಿಸರು ತಕ್ಷಣ ಮಹಿಳೆಯನ್ನು ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಸಾಗಿಸಿದ್ದರಾದರೂ ಸೌಲಭ್ಯಗಳ ಕೊರತೆಯ ನೆಪದಲ್ಲಿ ಆಕೆಯನ್ನು ದಾಖಲಿಸಲಿಕೊಳ್ಳಲು ನಿರಾಕರಿಸಲಾಗಿತ್ತು. ಬಳಿಕ ಪೋಲಿಸರು ಮಹಿಳೆಯನ್ನು ಕೂಪರ್ ಆಸ್ಪತ್ರೆಗೆ ಒಯ್ದಿದ್ದು,ಸಂಕ್ಷಿಪ್ತ ತಪಾಸಣೆಯ ಬಳಿಕ ಆಕೆಯನ್ನು ದಾಖಲಿಸಿಕೊಳ್ಳಲು ಅದೂ ನಿರಾಕರಿಸಿತ್ತು. ಎಂಟು ಗಂಟೆಗಳ ಕಾಲ ಪೋಲಿಸರ ಪರದಾಟದ ಬಳಿಕ ಸೀನಿಯರ್ ಇನ್ಸ್ಪೆಕ್ಟರ್ ರವೀಂದ್ರ ಪಾಟೀಲ್ ಖುದ್ದಾಗಿ ಮಧ್ಯಪ್ರವೇಶಿಸಿದ ನಂತರವಷ್ಟೇ ಕೂಪರ್ ಆಸ್ಪತ್ರೆ ಆಕೆಯನ್ನು ದಾಖಲಿಸಿಕೊಂಡಿದೆ.
ಪೋಲಿಸರು ಯಶೋದಾರ ಭಾವಚಿತ್ರವನ್ನು ಎಲ್ಲ ಪೋಲಿಸ್ ಠಾಣೆಗಳಿಗೂ ರವಾನಿಸಿದ್ದಾರೆ. ಆಕೆ ತಿಳಿಸಿದ್ದ ಮಲಾಡ್ ಮತ್ತು ಕಾಂದಿವಲಿಯ ಎರಡು ವಿಳಾಸಗಳಿಗೆ ಪೋಲಿಸರು ಭೇಟಿ ನೀಡಿದ್ದರಾದರೂ ಯಾವುದೇ ಸಂಬಂಧಿಗಳು ಆಕೆಯನ್ನು ಗುರುತಿಸಿಲ್ಲ.
ಪೋಲಿಸರೀಗ ಮಹಿಳೆಯ ವಾರಸುದಾರರ ಪತ್ತೆಗಾಗಿ ಸಾರ್ವಜನಿಕರ ನೆರವನ್ನು ಕೋರಿದ್ದಾರೆ.







