ಪಹಲ್ಗಾಮ್ ದಾಳಿ ಬಳಿಕ ಪಾಕ್ಗೆ ಗಡೀಪಾರಾಗಿದ್ದ ಮಹಿಳೆಗೆ ಭಾರತಕ್ಕೆ ಮರಳಲು ಅವಕಾಶ ನೀಡಿದ ಸರಕಾರ

ಸಾಂದರ್ಭಿಕ ಚಿತ್ರ (PTI)
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗಡೀಪಾರಾಗಿದ್ದ ಸುಮಾರು ಮೂರು ತಿಂಗಳ ನಂತರ ರಕ್ಷಾಂದ ರಶೀದ್ ಅವರಿಗೆ ಭಾರತ ಸರಕಾರ ಹೊಸ ಸಂದರ್ಶಕ ವೀಸಾವನ್ನು ನೀಡಿದೆ. ಇದರಿಂದಾಗಿ ಭಾರತಕ್ಕೆ ಮರಳಲು ಅವರಿಗೆ ಅವಕಾಶ ಸಿಕ್ಕಿದಂತಾಗಿದೆ.
ನಿವೃತ್ತ ಭಾರತೀಯ ಸರಕಾರಿ ಅಧಿಕಾರಿಯನ್ನು ವಿವಾಹವಾಗಿದ್ದ ಪಾಕಿಸ್ತಾನದ ಪ್ರಜೆ ರಕ್ಷಾಂದ ರಶೀದ್, ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ 38 ವರ್ಷಗಳಿಂದ ಜಮ್ಮುವಿನಲ್ಲಿ ವಾಸಿಸುತ್ತಿದ್ದರು.
ಎಪ್ರಿಲ್ 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 1946ರ ವಿದೇಶಿಯರ ಕಾಯ್ದೆಯ ಸೆಕ್ಷನ್ 3(1) ರ ಅಡಿಯಲ್ಲಿ ಗೃಹ ಸಚಿವಾಲಯ ಎಲ್ಲಾ ಅಲ್ಪಾವಧಿಯ ವೀಸಾಗಳನ್ನು ರದ್ದುಗೊಳಿಸಿದ ನಂತರ ಗಡೀಪಾರು ಮಾಡಲಾದ ಸುಮಾರು 60 ಪಾಕಿಸ್ತಾನಿ ಪ್ರಜೆಗಳಲ್ಲಿ ಅವರು ಓರ್ವರಾಗಿದ್ದರು.
ಎಪ್ರಿಲ್ 28 ರಂದು ರಶೀದ್ ಅವರಿಗೆ ಭಾರತ ಬಿಟ್ಟು ಹೋಗುವಂತೆ ಸೂಚನೆ ನೀಡಲಾಗಿತ್ತು. ಮರುದಿನ ಅವರನ್ನು ವಾಘಾ-ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆ. ಅಂದಿನಿಂದ, ಅವರು ಲಾಹೋರ್ನ ಹೋಟೆಲ್ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು ಎಂದು ಹೇಳಲಾಗಿದೆ.
ಗಡೀಪಾರು ಪ್ರಶ್ನಿಸಿ ರಶೀದ್ ಜಮ್ಮುಕಾಶ್ಮೀರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ನ್ಯಾಯಾಧೀಶರು ಅಧಿಕಾರಿಗಳಿಗೆ ಅವರನ್ನು ವಾಪಾಸ್ಸು ಬರಲು ಅನುಕೂಲ ಮಾಡಿಕೊಡುವಂತೆ ನಿರ್ದೇಶನ ನೀಡಿದ್ದರು. ಆದರೆ, ಕೇಂದ್ರ ಸರಕಾರ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು ಮತ್ತು ಪ್ರಕರಣವು ವಿಭಾಗೀಯ ಪೀಠಕ್ಕೆ ತಲುಪಿತ್ತು. ಜುಲೈ 30ರಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತ್ಯೇಕ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ, ಅಧಿಕಾರಿಗಳು ಅವರಿಗೆ ಹೊಸ ಸಂದರ್ಶಕ ವೀಸಾ ನೀಡಲು ನಿರ್ಧರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮಹಿಳೆಯ ವಕೀಲರು ಈ ಪ್ರಸ್ತಾವನೆಯನ್ನು ಒಪ್ಪಿಕೊಂಡು ರಿಟ್ ಅರ್ಜಿಯನ್ನು ವಾಪಾಸ್ಸು ಪಡೆದಿದ್ದಾರೆ.







