ಕೇರಳ | ಚಲಿಸುತ್ತಿದ್ದ ರೈಲಿನಿಂದ 64 ವರ್ಷದ ವೃದ್ಧೆಯನ್ನು ಕೆಳಕ್ಕೆ ತಳ್ಳಿ, ದರೋಡೆ

ಸಾಂದರ್ಭಿಕ ಚಿತ್ರ (PTI)
ಕೋಯಿಕ್ಕೋಡ್: ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲು ಕೋಯಿಕ್ಕೋಡ್ ರೈಲ್ವೆ ನಿಲ್ದಾಣವನ್ನು ತೊರೆದ ಕೆಲವೇ ಕ್ಷಣಗಳಲ್ಲಿ ನಿಧಾನಕ್ಕೆ ಚಲಿಸುತ್ತಿದ್ದ ರೈಲಿನಿಂದ 64 ವರ್ಷದ ವೃದ್ಧೆಯನ್ನು ಕೆಳಕ್ಕೆ ತಳ್ಳಿ, ಆಕೆಯಿಂದ 8,000 ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಅನ್ನು ದರೋಡೆ ಮಾಡಲಾಗಿದೆ ಎಂದು ಶನಿವಾರ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯು ತನ್ನ ಸಹೋದರನೊಂದಿಗೆ ಮಹಾರಾಷ್ಟ್ರದ ಪನ್ವೆಲ್ ನಿಂದ ಕೇರಳದ ತ್ರಿಶೂರ್ ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರೈಲು ಕೋಯಿಕ್ಕೋಡ್ ರೈಲು ನಿಲ್ದಾಣವನ್ನು ತೊರೆದ ಕೆಲವೇ ಕ್ಷಣಗಳಲ್ಲಿ ಶುಕ್ರವಾರ ಮುಂಜಾನೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಕೇರಳದ ಹೊರಗಿನವರಂತಿದ್ದರು ಎಂದು ಮಹಿಳೆ ಮಾಹಿತಿ ನೀಡಿದ್ದಾರೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತನ್ನ ಸಹೋದರನು ಶೌಚಾಲಯದಿಂದ ಹೊರಗೆ ಬರುವುದನ್ನು ಕಾಯುತ್ತಾ ಮಹಿಳೆಯು ರೈಲಿನ ಬಾಗಿಲ ಬಳಿ ನಿಂತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ದುಷ್ಕರ್ಮಿಗಳು ಆಕೆಯ ಚೀಲವನ್ನು ಕಿತ್ತುಕೊಳ್ಳವಲು ಯತ್ನಿಸಿದ್ದಾರೆ. ಅದಕ್ಕೆ ಆಕೆ ಪ್ರತಿರೋಧ ತೋರಿದಾಗ, ಆಕೆಯನ್ನು ರೈಲಿನಿಂದ ಕೆಳಕ್ಕೆ ದೂಡಿದ್ದಾರೆ. ನಂತರ, ಆಕೆಯ ಮೇಲೆ ಜಿಗಿದು, ಆಕೆಯ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದೂ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಹಾಗೂ ಸೆರೆ ಹಿಡಿಯಲು ತಂಡವೊಂದನ್ನು ರಚಿಸಲಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.







