ಐದು ವರ್ಷಗಳಲ್ಲಿ 65 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ!

ಮುಂಬೈ: ಮಂಗಳವಾರ ವರದಿಯಾದ ಕಾನ್ಪುರ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಕ್ಯಾಂಪಸ್ ಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯ ಬಗೆಗಿನ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕಳೆದ ಐದು ವರ್ಷದ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ಪ್ರತಿ ವರ್ಷ ಸರಾಸರಿ 12-13 ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
2021ರ ಜನವರಿಯಿಂದ 2025ರ ಡಿಸೆಂಬರ್ ವರೆಗೆ ದೇಶದ ಐಐಟಿಗಳಲ್ಲಿ ಕನಿಷ್ಠ 65 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಂಶ ಜಾಗತಿಕ ಐಐಟಿ ಹಳೆವಿದ್ಯಾರ್ಥಿಗಳ ಬೆಂಬಲ ಗುಂಪು ಕ್ರೋಢೀಕರಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 30 ಇಂಥ ಪ್ರಕರಣಗಳು ವರದಿಯಾಗಿವೆ. ಇದು ಸಾಂಸ್ಥಿಕ ಹೊಣೆಗಾರಿಕೆ ಬಗೆಗಿನ ಆತಂಕಕ್ಕೆ ಕಾರಣವಾಗಿದೆ. ತಾಂತ್ರಿಕ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ವಿದ್ಯಾರ್ಥಿಗಳು ಕೂಡಾ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸೇರಿದ್ದಾರೆ. ಆತ್ಮಹತ್ಯೆಗೆ ಅಧಿಕಾರಿಗಳು ನೀಡುವ ಕಾರಣ ವೈಯಕ್ತಿಕ ಅಥವಾ ಶೈಕ್ಷಣಿಕ ಒತ್ತಡ.
ವಿದ್ಯಾರ್ಥಿ ಸಂಘಗಳು ಮತ್ತು ಹಳೆ ವಿದ್ಯಾರ್ಥಿ ಸಂಘಗಳು ಇಂತಹ ವಿವರಣೆಗಳು ಸಂಕೀರ್ಣ ವಾಸ್ತವತೆಗಳನ್ನು ಮರೆಮಾಚುತ್ತವೆ ಎಂದು ಅಭಿಪ್ರಾಯಪಡುತ್ತವೆ. ನಿರ್ದಾಕ್ಷಿಣ್ಯ ಮೌಲ್ಯಮಾಪನ, ಸ್ಪರ್ಧಾತ್ಮಕತೆ, ಏಕಾಂತ ಹಾಗೂ ಕೆಲ ಪ್ರಕರಣಗಳಲ್ಲಿ ಜಾತಿ ಅಥವಾ ಭಾಷೆ ಆಧರಿತ ಬೇರ್ಪಡಿಸುವಿಕೆಯಿಂದ ಈ ವಿಪರೀತದ ಕ್ರಮಕ್ಕೆ ವಿದ್ಯಾರ್ಥಿಗಳು ಮುಂದಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಎಚ್ಚರಿಕೆಯ ಸಂಕೇತಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತಿದೆ ಹಾಗೂ ಹಸ್ತಕ್ಷೇಪದ ವೇಳೆಗೆ ಪರಿಸ್ಥಿತಿ ಕೈಮೀರಿರುತ್ತದೆ ಎನ್ನುವುದನ್ನು ಬೋಧಕ ಸಿಬ್ಬಂದಿ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.
ದೇಶಾದ್ಯಂತ 2023ರಲ್ಲಿ 13 ಸಾವಿರ ವಿದ್ಯಾರ್ಥಿಗಳು ಅಂದರೆ ದಿನಕ್ಕೆ 36 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎನ್‌ಸಿಆರ್‌ಬಿ ದಾಖಲೆಗಳು ಹೇಳುತ್ತವೆ.
ದೇಶದ ಐಐಟಿಗಳಲ್ಲಿ ಸಂಭವಿಸಿದ ಒಟ್ಟು ಪ್ರಕರಣಗಳಲ್ಲಿ ಶೇಕಡ 30ರಷ್ಟು ಪ್ರಕರಣಗಳು ಕಾನ್ಪುರ ಐಐಟಿಯಲ್ಲೇ ವರದಿಯಾಗಿವೆ. ಸುಪ್ರೀಂಕೋರ್ಟ್ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿ ಆತ್ಮಹತ್ಯೆ ತಡೆಗೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಪಡೆಯನ್ನೂ ರಚಿಸಿದೆ. ಆದರೆ ಗ್ಲೋಬಲ್ ಐಐಟಿ ಅಲ್ಯುಮ್ನಿ ಸಪೋರ್ಟ್ ಗ್ರೂಪ್ ಸಂಸ್ಥಾಪಕ ಧೀರಜ್ ಸಿಂಗ್ ಅವರ ಪ್ರಕಾರ, ಆತ್ಮಹತ್ಯೆ ಪ್ರಕರಣಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವುದು ಅಗತ್ಯ.







