ಮೇಘಸ್ಫೋಟದಿಂದ ಹಿಮಾಚಲ ಪ್ರದೇಶ ತತ್ತರ : ಕನಿಷ್ಠ 69 ಜನರು ಮೃತ್ಯು, 37 ಮಂದಿ ನಾಪತ್ತೆ
ಭಾರೀ ಮಳೆ, ಪ್ರವಾಹದಿಂದ 700 ಕೋಟಿ ರೂ. ನಷ್ಟ
ಹೊಸದಿಲ್ಲಿ: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶ ತತ್ತರಿಸಿದೆ. ಭಾರೀ ಮಳೆ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಂದ ಈವರೆಗೆ ಕನಿಷ್ಠ 69 ಜನರು ಮೃತಪಟ್ಟಿದ್ದಾರೆ. 110 ಜನರು ಗಾಯಗೊಂಡಿದ್ದು, 37 ಜನರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ತಿಳಿಸಿದ್ದಾರೆ.
ಜುಲೈ 7ರ ಸೋಮವಾರದವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭಾರೀ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮೇಘಸ್ಫೋಟದಿಂದ ರಸ್ತೆಗಳು, ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆಗೆ ವ್ಯಾಪಕವಾದ ಹಾನಿಯಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಗೆ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಾಂಗ್ರಾದಲ್ಲಿ 13 ಮಂದಿ, ಚಂಬಾದಲ್ಲಿ ಆರು ಮಂದಿ, ಶಿಮ್ಲಾದಲ್ಲಿ ಐವರು ಮೃತಪಟ್ಟಿದ್ದಾರೆ.
ʼಭಾರೀ ಮಳೆ, ಪ್ರವಾಹದಿಂದ 700 ಕೋಟಿ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ. ರಸ್ತೆಗಳು ಮತ್ತು ನೀರಿನ ಸಂಪರ್ಕಯೋಜನೆಗಳು ಹಾನಿಗೊಳಗಾಗಿವೆ. ವಿದ್ಯುತ್ ತಂತಿಗಳು ಮತ್ತು ಕಂಬಗಳು ಕಿತ್ತುಹೋಗಿವೆ. ಇದರಿಂದಾಗಿ ಗಮನಾರ್ಹ ನಷ್ಟವಾಗಿದೆ. ತೋಟಗಾರಿಕೆ ಕಾಲೇಜಿನಲ್ಲಿ ಸಿಲುಕಿಕೊಂಡಿದ್ದ 92 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಹಿಮಾಚಲ ಪ್ರದೇಶ ಸರಕಾರ ವಿಪತ್ತು ಪೀಡಿತ ಕುಟುಂಬಗಳ ಜೊತೆಗಿದೆʼ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಹೇಳಿದ್ದಾರೆ.