ಬಿಹಾರ: ಕಳ್ಳಭಟ್ಟಿ ಮದ್ಯ ಸೇವಿಸಿ 7 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ (PTI)
ಬೆಟ್ಟಯ್ಯ: ಕಳ್ಳಭಟ್ಟಿ ಮಧ್ಯ ಸೇವಿಸಿ ಏಳು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದ್ದು, ಈ ಸಂಬಂಧ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಮೊದಲ ವ್ಯಕ್ತಿಯ ಸಾವು ಸಂಭವಿಸಿದ್ದರೂ, ರವಿವಾರವಷ್ಟೆ ಈ ಸಾವುಗಳ ಕುರಿತು ಪೊಲೀಸರಿಗೆ ತಿಳಿದು ಬಂದಿದೆ. ಎಲ್ಲ ಏಳು ಮಂದಿ ಮೃತರ ಅಂತ್ಯಕ್ರಿಯೆಯನ್ನೂ ಈಗಾಗಲೇ ನೆರವೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಾವುಗಳು ಲೌರಿಯ ಪೊಲೀಸ್ ಠಾಣೆ ವ್ಯಾಪ್ತಿಯಿಂದ ವರದಿಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೌರ್ಯ ಸುಮನ್ ತಿಳಿಸಿದ್ದಾರೆ. ಈ ಸಾವುಗಳಿಗೆ ಕಳ್ಳ ಭಟ್ಟಿ ಮದ್ಯ ಸೇವನೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರೂ, ಕೊನೆಯದಾಗಿ ಮೃತಪಟ್ಟಿರುವ ಇಬ್ಬರು ಕಳ್ಳ ಭಟ್ಟಿ ಮದ್ಯ ಸೇವನೆಯಿಂದ ಮೃತಪಟ್ಟಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಓರ್ವ ವ್ಯಕ್ತಿಗೆ ಟ್ರ್ಯಾಕ್ಟರ್ ಢಿಕ್ಕಿ ಹೊಡೆದಿದ್ದರೆ, ಮತ್ತೊಬ್ಬ ವ್ಯಕ್ತಿಗೆ ಪಾರ್ಶ್ವವಾಯುಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಲ್ಲ ಮೃತದೇಹಗಳ ಅಂತ್ಯಕ್ರಿಯೆ ನಡೆಸಿರುವುದರಿಂದ ಸಾವಿಗೆ ನಿಖರ ಕಾರಣಗಳನ್ನು ಪತ್ತೆ ಹಚ್ಚುವುದು ಕ್ಲಿಷ್ಟಕರವಾಗಿದೆ ಎಂದು ಚಂಪಾರಣ್ ಉಪ ಅಭಿವೃದ್ಧಿ ಆಯುಕ್ತ ಸುಮಿತ್ ಕುಮಾರ್ ತಿಳಿಸಿದ್ದಾರೆ.
“ಈ ಕುರಿತು ಇನ್ನು 24 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ಸೂಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ಲೌರಿಯಾದಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೃತಪಟ್ಟಿರುವ ವ್ಯಕ್ತಿಗಳ ಗುರುತನ್ನೂ ತನಿಖಾ ತಂಡ ಪತ್ತೆ ಹಚ್ಚಲಿದೆ ಎಂದು ಅವರು ಹೇಳಿದ್ದಾರೆ.







