ತೆಲಂಗಾಣ | ‘ಡಿಜಿಟಲ್ ಅರೆಸ್ಟ್’ ಹಗರಣ; 71 ವರ್ಷದ ವ್ಯಕ್ತಿಗೆ ಸುಮಾರು 2 ಕೋಟಿ ರೂ. ವಂಚನೆ

ಸಾಂದರ್ಭಿಕ ಚಿತ್ರ | PC : Image by freepik
ಇಂಫಾಲ, ನ. 30: ಇನ್ನೊಂದು ‘ಡಿಜಿಟಲ್ ಅರೆಸ್ಟ್’ ಪ್ರಕರಣದಲ್ಲಿ ಹೈದರಾಬಾದ್ ನ ಸೈಬರ್ ಕ್ರೈಮ್ ಪೊಲೀಸರು ಹಿರಿಯ ನಾಗರಿಕರೊಬ್ಬರಿಂದ 1.92 ಕೋಟಿ ರೂ. ಸುಲಿಗೆ ಮಾಡಿದ ಆರೋಪದಲ್ಲಿ ಮೂವರು ವಂಚಕರನ್ನು ಬಂಧಿಸಿದ್ದಾರೆ.
‘‘ಡಿಜಿಟಲ್ ಅರೆಸ್ಟ್’’ ಸೋಗಿನಲ್ಲಿ ಸೈಬರ್ ವಂಚಕರು ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಹೈದರಾಬಾದ್ ನ 71 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಸಿಬಿಐ ಅಧಿಕಾರಿಗಳಂತೆ ಸೋಗು ಹಾಕಿದ ವಂಚಕರು ನವೆಂಬರ್ 7 ಹಾಗೂ 14ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ 1,92,50,070 ರೂ.ವನ್ನು ಆ ವ್ಯಕ್ತಿಯಿಂದ ಜಮೆ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗದೆ ಎಂದು ವಂಚಕರು ಆ ವ್ಯಕ್ತಿಗೆ ತಿಳಿಸಿದರು. ಆಧಾರ್ ಕಾರ್ಡ್ ಬಳಿಸಿ ಮುಂಬೈಯ ಕೆನರಾ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ ಎಂದು ಅವರು ಹೇಳಿದರು.
ಅವರು ವೀಡಿಯೊ ಕರೆ ಮಾಡಿ ಫೋಟೊ ಹಾಗೂ ಕೆನರಾ ಬ್ಯಾಂಕ್ ನ ಎಟಿಎಂ ಕಾರ್ಡ್ ತೋರಿಸಿದರು. ಅಲ್ಲದೆ, ದಿಲ್ಲಿ ಸಿಬಿಐಯ ನಕಲಿ ಎಫ್ಐಆರ್ ಅನ್ನು ಕೂಡ ಕಳುಹಿಸಿದರು. ಅನಂತರ ಅವರು ಪ್ರಕರಣ ಮುಚ್ಚಿ ಹಾಕಲು ಹಣದ ಬೇಡಿಕೆ ಇರಿಸಿದರು. ವ್ಯಕ್ತಿ ಅವರು ನೀಡಿದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದರು ಎಂದು ಅವರು ಹೇಳಿದ್ದಾರೆ.
ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಬಳಿಕ ಆ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದರು. ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದರು ಎಂದು ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪಾಂಡು ವಿನೀತ್ ರಾಜ್, ಜಿ. ತಿರುಪತಯ್ಯ ಹಾಗೂ ಗೌನಿ ವಿಶ್ವನಾಥಮ್ ಅವರನ್ನು ಬಂಧಿಸಿದ್ದಾರೆ. ಎಲ್ಲರೂ ಹೈದರಾಬಾದ್ ನ ನಿವಾಸಿಗಳು. ಮುಖ್ಯ ಆರೋಪಿಯಾಗಿರುವ ಸಂದೀಪ್ ಆಲಿಯಾಸ್ ಅಲೆಕ್ಸ್ ತಲೆಮರೆಸಿಕೊಂಡಿದ್ದಾನೆ.







