2022-23ರಲ್ಲಿ ಬಿಜೆಪಿಯಿಂದ 719 ಕೋಟಿ ರೂ. ದೇಣಿಗೆ ಸ್ವೀಕಾರ
ದೇಣಿಗೆ ನೀಡಿದ ನರ್ಸರಿಗಳು, ಮದ್ಯದಂಗಡಿಗಳು, ಗಿರಣಿಗಳು, ಹಾರ್ಡ್ವೇರ್ ಅಂಗಡಿಗಳು!
ಚುನಾವಣಾ ಆಯೋಗ | Photo : PTI
ಹೊಸದಿಲ್ಲಿ: ಕೇಂದ್ರದ ಆಡಳಿತಾರೂಢ ಪಕ್ಷವಾದ ಬಿಜೆಪಿಯು 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ 719.8 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿದೆಯೆಂದು ಚುನಾವಣಾ ಆಯೋಗ ತಿಳಿಸಿದೆ. ಬಿಜೆಪಿಯ ವಾರ್ಷಿಕ ದೇಣಿಗೆ ವರದಿಯನ್ನು ಆಧರಿಸಿ ಚುನಾವಣಾ ಆಯೋಗ ಗುರುವಾರ ಈ ವಿವರವನ್ನು ಪ್ರಕಟಿಸಿದೆ.
20 ಸಾವಿರ ರೂ. ಹಾಗೂ ಅದಕ್ಕಿಂತ ಅಧಿಕ ಮೊತ್ತದ ದೇಣಿಗೆಯನ್ನು ಚೆಕ್, ಬ್ಯಾಂಕ್ ವರ್ಗಾವಣೆ, ಆನ್ಲೈನ್ ವರ್ಗಾವಣೆ ಹಾಗೂ ಯುಪಿಐ ವಿಧಾನಗಳ ಮೂಲಕ ಪಡೆಯಲಾಗಿದೆ. ಆದರೆ ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಲಾದ ದೇಣಿಗೆಯನ್ನು ಈ ಮೊತ್ತವು ಒಳಗೊಂಡಿಲ್ಲವೆಂದು ಆಯೋಗದ ವರದಿ ತಿಳಿಸಿದೆ.
2021-22ನೇ ಸಾಲಿನಲ್ಲಿ ಬಿಜೆಪಿಯು ಪ್ರಕಟಿಸಿದ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ಸುಮಾರು 612.52 ಕೋಟಿ ರೂ. ದೇಣಿಗೆಯನ್ನು ಬಿಜೆಪಿಯು ಇಂತಹ ವಿಧಾನಗಳ ಮೂಲಕ ಮತ್ತು 1033.7 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್ ಗಳ ರೂಪದಲ್ಲಿ ಪಡೆದಿದೆ.
ಚುನಾವಣಾ ಬಾಂಡ್ ಗಳನ್ನು ಪೌರರು ಹಾಗೂ ಕಾರ್ಪೋರೇಟ್ ಉದ್ಯಮ ಸಮೂಹಗಳು ಬ್ಯಾಂಕ್ ನಿಂದ ಖರೀದಿಸಿ, ರಾಜಕೀಯ ಪಕ್ಷಕ್ಕೆ ನೀಡಬಹುದಾಗಿದೆ. ಅವುಗಳನ್ನು ನಗದುಗೊಳಿಸಲು ರಾಜಕೀಯ ಪಕ್ಷಗಳಿಗೆ ಮುಕ್ತ ಅವಕಾಶವಿರುತ್ತದೆ. ಇಡೀ ಪ್ರಕ್ರಿಯೆಯು ಅನಾಮಧೇಯವಾಗಿಯೇ ನಡೆಯಲಿದ್ದು ಬಡ್ಡಿರಹಿತವಾದ ಈ ಬಾಂಡ್ ಗಳನ್ನು ಖರೀದಿಸಿರುವ ಬಗ್ಗೆ ಯಾರೂ ಕೂಡಾ ಸ್ವಘೋಷಣೆ ಮಾಡುವ ಅಗತ್ಯವಿರುವುದಿಲ್ಲ. ಆದರೆ ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಲಾದ ಹಣದ ಒಟ್ಚು ಮೊತ್ತವನ್ನು ರಾಜಕೀಯ ಪಕ್ಷಗಳು ತಮ್ಮ ಬ್ಯಾಂಕ್ ಖಾತೆಗಳ ಸ್ಟೇಟ್ ಮೆಂಟ್ ಗಳನ್ನು ಸಲ್ಲಿಸುವ ಮೂಲಕ ಚುನಾವಣಾ ಆಯೋಗದ ಮುಂದೆ ಬಹಿರಂಗಪಡಿಸಬೇಕಾಗುತ್ತದೆ.
ಕಳೆದ ವಿತ್ತೀಯ ವರ್ಷದಲ್ಲಿ ಬಿಜೆಪಿಯ ಹಣಕಾಸಿನ ದೇಣಿಗೆ ನೀಡಿದ ದಾನಿಗಳಲ್ಲಿ ಅದೇ ಪಕ್ಷದ ಮುಖ್ಯಮಂತ್ರಿಗಳಾದ ಅಸ್ಸಾಂನ ಹಿಮಂತ ಬಿಸ್ವ ಶರ್ಮಾ, ಉತ್ತರಪ್ರದೇಶದ ಆದಿತ್ಯನಾಥ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸೇರಿದ್ದಾರೆ.
ದೇಣಿಗೆ ನೀಡಿದವರಲ್ಲಿ ವಿವಿಧ ಸಣ್ಣ ಉದ್ಯಮಸಂಸ್ಥೆಗಳು, ಖಾಸಗಿ ಶಾಲೆಗಳು, ಶಿಕ್ಷಣ ಹಾಗೂ ದತ್ತಿಸಂಸ್ಥೆಗಳು, ಗಣಿಗಾರಿಕೆ , ನಿರ್ಮಾಣ ಸಂಸ್ಥೆಗಳು, ತ್ಯಾಜ್ಯ ನಿರ್ವಹಣಾ ಕಂಪೆನಿಗಳು, ಡಿಸ್ಟಿಲರಿಗಳು ಹಾಗೂ ರೆಸ್ಟೊರೆಂಟ್ ಗಳು ಕೂಡಾ ಒಳಗೊಂಡಿವೆ ಎಂದು ವರದಿ ತಿಳಿಸಿದೆ.
ಬಿಜೆಪಿಗೆ ದೇಣಿಗೆ ನೀಡಿದ ಸಣ್ಣ ಉದ್ಯಮಸಂಸ್ಥೆಗಳಲ್ಲಿ ಸಸ್ಯ ನರ್ಸರಿಗಳು, ಮದ್ಯದಂಗಡಿಗಳು,ಗಿರಣಿಗಳು ಹಾಗೂ ಹಾರ್ಡ್ವೇರ್ ಅಂಗಡಿಗಳು ಒಳಗೊಂಡಿವೆ. ಚುನಾವಣಾ ಆಯೋಗವು ಇತರ ಪಕ್ಷಗಳ ದೇಣಿಗೆ ವಿವರಗಳ ಕುರಿತಂತೆ ಇದೇ ರೀತಿಯ ವರದಿಗಳನ್ನು ಇಂದು ಪ್ರಕಟಿಸಿದೆ.
ಕಳೆದ ವಿತ್ತೀಯ ವರ್ಷದಲ್ಲಿ ಆಮ್ ಆದ್ಮಿ ಪಕ್ಷವು 37 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿದೆ. ಸಿಪಿಎಂ ಪಕ್ಷವು 6.02 ಕೋಟಿ ರೂ. ಮೌಲ್ಯದ ದೇಣಿಗೆಗಳನ್ನು ಘೋಷಿಸಿದೆ. ಬಹುಜನ ಸಮಾಜ ಪಕ್ಷವು ತಾನು ಯಾವುದೇ ದೇಣಿಗೆ ಪಡೆದಿಲ್ಲವೆಂದು ಘೋಷಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ದೊರೆತಿರುವ ದೇಣಿಗೆಗಳ ವರದಿಯನ್ನು ಆಯೋಗವು ಇನ್ನಷ್ಟೇ ಪ್ರಕಟಿಸಬೇಕಾಗಿದೆ.