ನಕಲಿ ಗೌರವ ಡಾಕ್ಟರೇಟ್ ನೀಡಿ ಜನರನ್ನು ವಂಚಿಸುತ್ತಿದ್ದ 75 ವರ್ಷದ ವ್ಯಕ್ತಿಯ ಬಂಧನ

ಸಾಂದರ್ಭಿಕ ಚಿತ್ರ | Photo Credit : freepik.com
ಹೈದರಾಬಾದ್: ಏಳು ಜನರಿಗೆ ನಕಲಿ ಗೌರವ ಡಾಕ್ಟರೇಟ್ ನೀಡಿ ವಂಚಿಸಿದ್ದ ಆರೋಪದ ಮೇಲೆ ಆಂಧ್ರಪ್ರದೇಶದ 75 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಟೂರು ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಂಘಟನೆಯೊಂದನ್ನು ನಡೆಸುತ್ತಿರುವ ಆರೋಪಿಯು, ರವಿವಾರ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಏಳು ಮಂದಿಗೆ ನಕಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದ. ಈ ಡಾಕ್ಟರೇಟ್ ಅನ್ನು ಯಾವುದೇ ವಿಶ್ವವಿದ್ಯಾಲಯ ನೀಡಿರಲಿಲ್ಲ.
ಪೊಲೀಸರ ಪ್ರಕಾರ, ಈ ಹಿಂದೆ ತಮ್ಮ ಸಂಸ್ಥೆಯ ಮೂಲಕ ಹಲವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದ ಆರೋಪಿಯು, ನಾನು ನಿಮಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತೇನೆ ಎಂದು ಜನರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.
ಮೆಸೇಜಿಂಗ್ ಆ್ಯಪ್ ಮೂಲಕ ನನ್ನನ್ನು ಸಂಪರ್ಕಿಸಿದ್ದ ಆರೋಪಿಯು, ನನಗೆ ಗೌರವ ಡಾಕ್ಟರೇಟ್ಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿದ್ದರು ಎಂದು ವಿದ್ವಾಂಸರೊಬ್ಬರು ದೂರು ನೀಡಿದ್ದರು.
ಗೌರವ ಡಾಕ್ಟರೇಟ್ಗಾಗಿ ದೂರುದಾರರಿಂದ ಆರೋಪಿಯು ಸದಸ್ಯತ್ವ ಶುಲ್ಕವಾಗಿ 20,000 ರೂ. ಸಂಗ್ರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ, ತನ್ನ ಸಂಸ್ಥೆಯ ಮೂಲಕ ಆರೋಪಿಯು, ದೂರುದಾರರು ಹಾಗೂ ಇನ್ನಿತರ ಆರು ಮಂದಿಗೆ ಗೌರವ ಡಾಕ್ಟರೇಟ್ ಪ್ರಮಾಣ ಪತ್ರವನ್ನು ವಿತರಿಸಿದ್ದ ಎನ್ನಲಾಗಿದೆ.
ದೂರನ್ನು ಆಧರಿಸಿ ಆರೋಪಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೈಫಾಬಾದ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಗೌರವ ಡಾಕ್ಟರೇಟ್ ಅನ್ನು ವಿಶ್ವವಿದ್ಯಾಲಯಗಳೇ ಪ್ರದಾನ ಮಾಡಬೇಕು ಎಂಬ ಸಂಗತಿ ನನಗೆ ತಿಳಿದಿರಲಿಲ್ಲ ಎಂದು ಆತ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ, ತನಿಖೆ ಪ್ರಗತಿಯಲ್ಲಿದೆ.







