ಇ.ಡಿ.ಯಿಂದ ನ್ಯಾಷನಲ್ ಹೆರಾಲ್ಡ್ ನ 751 ಕೋ.ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ನ್ಯಾಷನಲ್ ಹೆರಾಲ್ಡ್ | Photo; NDTV
ಹೊಸದಿಲ್ಲಿ: ಕಾಂಗ್ರೆಸ್ ನಡೆಸುತ್ತಿರುವ ‘ನ್ಯಾಷನಲ್ ಹೆರಾಲ್ಡ್’ಸುದ್ದಿ ಪತ್ರಿಕೆಯೆ ವ್ಯವಹಾರಗಳ ಕುರಿತಂತೆ ಹಣ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (ಎಜೆಎಲ್) ಹಾಗೂ ಯಂಗ್ ಇಂಡಿಯಾ (ವೈಜೆ)ಕ್ಕೆ ಸೇರಿದ 751 ಕೋ.ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಜಾರಿನಿರ್ದೇಶನಾಲಯ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನ ದಿಲ್ಲಿ, ಮುಂಬೈ ಹಾಗೂ ಲಕ್ನೊದಲ್ಲಿರುವ 661 ಕೋ.ರೂ. ಮೌಲ್ಯದ ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯಂಗ್ ಇಂಡಿಯನ್ ಸಂಸ್ಥೆಯ ಇಕ್ವಿಟಿ ರೂಪದಲ್ಲಿರುವ ಅಪರಾಧದ ಆದಾಯವನ್ನು ಕೂಡ ಮುಟ್ಟುಗೋಲು ಹಾಕಿಕೊಂಡಿದೆ.
2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ನಡೆಸುತ್ತಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ 751.9 ಕೋ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳುವ ಔಪಚಾರಿಕ ಆದೇಶವನ್ನು ಜಾರಿ ನಿರ್ದೇಶನಾಲಯ ಹೊರಡಿಸಿದೆ.
ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (ಎಜೆಎಲ್) ದಿಲ್ಲಿ, ಮುಂಬೈ ಹಾಗೂ ಲಕ್ನೋದಂತಹ ಭಾರತದ ಹಲವು ನಗರಗಳಲ್ಲಿ 661.69 ಕೋ.ರೂ. ಮೌಲ್ಯದ ಸ್ಥಿರಾಸ್ತಿಯ ರೂಪದಲ್ಲಿ ಅಪರಾಧದ ಆದಾಯವನ್ನು ಹಾಗೂ ಯಂಗ್ ಇಂಡಿಯಾ (ವೈಐ) 90.21 ಕೋ.ರೂ. ಮೌಲ್ಯದ ಇಕ್ವಿಟಿ ಶೇರುಗಳ ರೂಪದಲ್ಲಿ ಅಪರಾಧದ ಆದಾಯವನ್ನು ಹೊಂದಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಖಾಸಗಿ ದೂರೊಂದನ್ನು ಪರಿಗಣನೆಗೆ ತೆಗೆದುಕೊಂಡ ದಿಲ್ಲಿಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2014 ಜೂನ್ 26ರಂದು ಆದೇಶವೊಂದನ್ನು ನೀಡಿತ್ತು. ಈ ಆದೇಶದ ಆಧಾರದಲ್ಲಿ ನ್ಯಾಷನಲ್ ಹೆರಾಲ್ಡ್ ನ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆಯ ತನಿಖೆ ಆರಂಭಿಸಿತ್ತು.