ಘನ ತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘನೆಗೆ ರಾಜ್ಯಗಳಿಗೆ 79,000 ಕೋಟಿ ರೂ. ದಂಡ

Photo: IANS
ಹೊಸದಿಲ್ಲಿ: 2022-23ರಲ್ಲಿ, ಮುನಿಸಿಪಲ್ ಘನ ತ್ಯಾಜ್ಯ ಮತ್ತು ಇತರ ಪರಿಸರ ನಿಯಮಗಳ ಉಲ್ಲಂಘನೆಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ )ಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 79,098 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಕೇಂದ್ರ ಸರಕಾರವು ಗುರುವಾರ ಸಂಸತ್ ಗೆ ತಿಳಿಸಿದೆ.
ತಮಿಳುನಾಡಿಗೆ ಗರಿಷ್ಠ, ಅಂದರೆ 15,419 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ಸಹಾಯಕ ಸಚಿವ ಅಶ್ವನಿ ಕುಮಾರ್ ಚೌಬೆ ರಾಜ್ಯಸಭೆಯಲ್ಲಿ ಹೇಳಿದರು. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (12,000 ಕೋಟಿ ರೂಪಾಯಿ) ಮತ್ತು ಮಧ್ಯಪ್ರದೇಶ (9,688 ಕೋಟಿ ರೂಪಾಯಿ) ಇವೆ.
ನ್ಯಾಯಮಂಡಳಿಯು ಉತ್ತರಪ್ರದೇಶಕ್ಕೆ 5,000 ಕೋಟಿ ರೂಪಾಯಿ, ಬಿಹಾರಕ್ಕೆ 4,000 ಕೋಟಿ ರೂಪಾಯಿ ಮತ್ತು ತೆಲಂಗಾಣಕ್ಕೆ 3,800 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 2019 ಮತ್ತು 2020ರಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 279 ನದಿಗಳ 311 ವಲಯಗಳನ್ನು ಮಾಲಿನ್ಯ ವಲಯಗಳೆಂದು ಗುರುತಿಸಿದೆ ಎಂದು ಸಚಿವರು ಹೇಳಿದರು.
ಮಂಡಳಿಯು 28 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ 516 ನಗರಗಳಲ್ಲಿರುವ 1,447 ವಾಯು ಗುಣಮಟ್ಟ ನಿಗಾ ಕೇಂದ್ರಗಳ ಮೂಲಕ ವಾಯು ಗುಣಮಟ್ಟದ ಮೇಲೆಯೂ ಕಣ್ಣಿಡುತ್ತದೆ ಎಂದು ಸಚಿವರು ತಿಳಿಸಿದರು.







