ದಿಲ್ಲಿ: ಭಾರೀ ಮಳೆಗೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಮೃತ್ಯು

Photo credit: PTI
ಹೊಸದಿಲ್ಲಿ: ಭಾರೀ ಮಳೆಯಿಂದಾಗಿ ದೇವಾಲಯಕ್ಕೆ ಹೊಂದಿಕೊಂಡಿರುವ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಮಕ್ಕಳು ಸೇರಿದಂತೆ 8 ಜನರು ಮೃತಪಟ್ಟಿರುವ ಘಟನೆ ಆಗ್ನೇಯ ದಿಲ್ಲಿಯ ಜೈತ್ಪುರ ಪ್ರದೇಶದ ಹರಿ ನಗರದಲ್ಲಿ ನಡೆದಿದೆ.
ಮೃತರನ್ನು ಶಬೀಬುಲ್ (30), ರಬೀಬುಲ್ (30), ಮುತ್ತು ಅಲಿ (45), ರುಬಿನಾ (25), ಡಾಲಿ (25), ಹಶಿಬುಲ್, ರುಖ್ಸಾನಾ (6), ಮತ್ತು ಹಸೀನಾ (7) ಎಂದು ಗುರುತಿಸಲಾಗಿದೆ.
ಹಳೆಯ ದೇವಾಲಯದ ಪಕ್ಕದಲ್ಲಿರುವ ಗೋಡೆ ಹಠಾತ್ತನೆ ಕುಸಿದ ಬಿದ್ದ ಬಳಿಕ ಹೆಚ್ಚಾಗಿ ಗುಜಿರಿ ಮಾರಾಟಗಾರರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಇಲ್ಲಿ ಒಂದು ಹಳೆಯ ದೇವಾಲಯವಿದೆ ಮತ್ತು ಅದರ ಪಕ್ಕದಲ್ಲಿ ಗುಜಿರಿ ವ್ಯಾಪಾರಿಗಳು ವಾಸಿಸುವ ಹಳೆಯ ಕೊಳೆಗೇರಿಗಳಿವೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಗೋಡೆ ಕುಸಿದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನಾವು ಕೊಳಗೇರಿ ನಿವಾಸಿಗಳನ್ನು ಸ್ಥಳಾಂತರಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಐಶ್ವರ್ಯ ಶರ್ಮಾ ತಿಳಿಸಿದ್ದಾರೆ.





