ಹಿಮಾಚಪ್ರದೇಶದಲ್ಲಿ ಮಳೆಯಿಂದ ಸುಮಾರು 8,000 ಕೋ.ರೂ. ನಷ್ಟ: ಸಿಎಂ ಸುಖ್ಖು

ಸುಖ್ವಿಂದರ್ ಸಿಂಗ್ ಸುಖ್ಖು | Photo : PTI
ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ, ನೆರೆ ಹಾಗೂ ರಸ್ತೆ, ಮೂಲಭೂತ ಸೌರ್ಕರ್ಯಗಳಿಗೆ ಉಂಟಾದ ಹಾನಿಯಿಂದ ರಾಜ್ಯಕ್ಕೆ ಸುಮಾರು 8,000 ಕೋ. ರೂ. ನಷ್ಟ ಉಂಟಾಗಿದೆ ಎಂದು ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ಶನಿವಾರ ಹೇಳಿದ್ದಾರೆ.
ರಾಜ್ಯ ತುರ್ತು ಸ್ಪಂದನಾ ಕೇಂದ್ರದ ಪ್ರಕಾರ ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ವರೆಗೆ ರಾಜ್ಯದಲ್ಲಿ ಸುಮಾರು 400 ಕೋ.ರೂ. ನಷ್ಟ ಉಂಟಾಗಿದೆ. ಸುಖ್ವಿಂದರ್ ಸಿಂಗ್ ಸುಖು ಅವರು 2,000 ಕೋ.ರೂ. ಮಧ್ಯಂತರ ಪರಿಹಾರ ನೀಡುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೋರಿದ್ದಾರೆ. ರಾಜ್ಯದಿಂದ ಸುಮಾರು 70,000 ಪ್ರವಾಸಿಗಳನ್ನು ತೆರವುಗೊಳಿಸಲಾಗಿದೆ. 15,000 ವಾಹನಗಳನ್ನು ಹಿಂದೆ ಕಳುಹಿಸಲಾಗಿದೆ. ಸುಮಾರು 500 ಪ್ರವಾಸಿಗಳು ಸ್ವಯಂಪ್ರೇರಿತವಾಗಿ ಹಿಂದಿರುಗಲು ನಿರ್ಧರಿಸಿದ್ದಾರೆ ಎಂದು ಸುಖು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ಪ್ರವಾಸಿಗರು ಕುಲ್ಲು ಜಿಲ್ಲೆಯ ಕಸೋಲ್, ಮಣಿಕರನ್ ಹಾಗೂ ಇತರ ಸಮೀಪದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಅವರು ತಮ್ಮ ವಾಹನಗಳು ಇಲ್ಲದೆ ಹಿಂದಿರುಗಲು ನಿರಾಕರಿಸಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ವರೆಗೆ ಹಾಗೂ ಎಲ್ಲಾ ರಸ್ತೆಗಳು ಸಂಚಾರಕ್ಕೆ ಮುಕ್ತಗೊಳ್ಳುವ ವರೆಗೆ ಕೆಲವು ದಿನಗಳ ಅಲ್ಲೇ ಇರಲು ನಿರ್ಧರಿಸಿದ್ದಾರೆ.
ಕಸೋಲ್-ಭುಂಟರ್ ರಸ್ತೆಯಲ್ಲಿರುವ ಧುಂಖಾರ ಸಮೀಪ ಭಾರೀ ಭೂಕುಸಿತ ಸಂಭವಿಸಿರುವುದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗಳು ನಡೆದುಕೊಂಡು ಇನ್ನೊಂದು ಬದಿ ತಲುಪಿದ್ದಾರೆ. ಆದರೆ, ಈ ಪ್ರವಾಸಿಗಳ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಸರಕಾರ ಸೂಚಿಸಿದೆ. ದುರಂತ ಸಂಭವಿಸಿದ ಶೇ. 80 ಪ್ರದೇಶಗಳಲ್ಲಿ ವಿದ್ಯುತ್, ನೀರು ಹಾಗೂ ಮೊಬೈಲ್ ಫೋನ್ ಸೇವೆಯನ್ನು ತಾತ್ಕಾಲಿಕವಾಗಿ ಮರು ಸ್ಥಾಪಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಆದಷ್ಟು ಬೇಗ ಅವಶ್ಯಕ ಸೇವೆಗಳನ್ನು ಮರು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿಕೆ ತಿಳಿಸಿದೆ
ಹಿಮಾಚಲ ಪ್ರದೇಶದ 899 ದಾರಿಗಳಲ್ಲಿ 256 ಬಸ್ ಗಳ ಸಂಚಾರವನ್ನು ಹಿಮಾಚಲ ರಸ್ತೆ ಸಾರಿಗೆ ಪ್ರಾಧಿಕಾರ ರದ್ದುಗೊಳಿಸಿದೆ. ಇದರಿಂದ ಎಚ್ಆರ್ಟಿಸಿಗೆ 5.56 ಕೋ.ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸ್ಥಳೀಯ ಹವಾಮಾನ ಇಲಾಖೆ ರಾಜ್ಯದ 12 ಜಿಲ್ಲೆಗಳ ಪೈಕಿ 10 ಜಿಲ್ಲೆಗಳ ದುರ್ಗಮ ಪ್ರದೇಶಗಳಲ್ಲಿ ಜುಲೈ 15ರಿಂದ 17ರ ವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಆರಂಜ್ ಅಲರ್ಟ್ ನೀಡಿದೆ.







