10 ವರ್ಷಗಳಲ್ಲಿ 81 ವಿಮಾನ ನಿಲ್ದಾಣಗಳಿಗೆ 10,852 ಕೋಟಿ ರೂ. ನಷ್ಟ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 9: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ನಿರ್ವಹಿಸುತ್ತಿರುವ 81 ವಿಮಾನ ನಿಲ್ದಾಣಗಳು ಕಳೆದ 10 ವರ್ಷಗಳ ಅವಧಿಯಲ್ಲಿ ಒಟ್ಟು 10,852.9 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ನಾಗರಿಕ ವಾಯುಯಾನ ಖಾತೆಯ ಸಹಾಯಕ ಸಚಿವ ಮುರಳೀಧರ ಮೊಹೊಲ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಇಂದು, ಈ ಪೈಕಿ 22 ವಿಮಾನ ನಿಲ್ದಾಣಗಳು ಮುಚ್ಚಿವೆ ಎಂದು ಅವರು ಇತ್ತೀಚೆಗೆ ಕಾಂಗ್ರೆಸ್ ನ ಜೇಬಿ ಮಾತೆರ್ ಹಿಸಮ್ ರ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ನಷ್ಟದಲ್ಲಿ ನಡೆಯುತ್ತಿರುವ ಭಾರತೀಯ ವಿಮಾನ ನಿಲ್ದಾಣಗಳ ಬಗ್ಗೆ ವಿವರಗಳನ್ನು ಕೋರಿದ್ದರು ಹಾಗೂ ನಗಣ್ಯ ವಿಮಾನ ಹಾರಾಟ ಇರುವ ವಿಮಾನ ನಿಲ್ದಾಣಗಳನ್ನು ಮುಚ್ಚುವ ಯೋಜನೆಗಳಿವೆಯೇ ಎಂದು ಕೇಳಿದ್ದರು. ನಷ್ಟದಲ್ಲಿರುವ ವಿಮಾನ ನಿಲ್ದಾಣಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯಿದೆಯೇ ಎನ್ನುವುದನ್ನೂ ಅವರು ತಿಳಿಯಲು ಬಯಸಿದ್ದರು.
2015-16 ಮತ್ತು 2024-25ರ ನಡುವಿನ ಅವಧಿಯಲ್ಲಿ ದೇಶಾದ್ಯಂತದ 81 ವಿಮಾನ ನಿಲ್ದಾಣಗಳು ಒಟ್ಟು 10,852.9 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಸಚಿವರು ತಿಳಿಸಿದರು. ಈ ಪೈಕಿ, ದಿಲ್ಲಿಯ ಸಫ್ದರ್ ಜಂಗ್ ವಿಮಾನ ನಿಲ್ದಾಣವು ಅತ್ಯಂತ ಹೆಚ್ಚು, ಅಂದರೆ 673.91 ಕೋಟಿ ರೂ. ನಷ್ಟ ಅನುಭವಿಸಿದೆ.
ಎರಡನೇ ಸ್ಥಾನದಲ್ಲಿ ಇರುವುದು 605.23 ಕೋಟಿ ರೂ. ನಷ್ಟ ಅನುಭವಿಸಿರುವ ಅಗರ್ತಲಾ ವಿಮಾನ ನಿಲ್ದಾಣ. ನಂತರದ ಸ್ಥಾನಗಳಲ್ಲಿ ಬರುವ ವಿಮಾನ ನಿಲ್ದಾಣಗಳೆಂದರೆ- ಹೈದರಾಬಾದ್ (564.97 ಕೋಟಿ ರೂ. ನಷ್ಟ), ಡೆಹ್ರಾಡೂನ್ (488.01 ಕೋಟಿ ರೂ. ನಷ್ಟ) ಮತ್ತು ವಿಜಯವಾಡ (483.69 ಕೋಟಿ ರೂ. ನಷ್ಟ).







