ಈಡಿಯಿಂದ ಕೇಜ್ರಿವಾಲ್ ಗೆ 8ನೇ ಸಮನ್ಸ್

ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಎಂಟನೇ ಸಮನ್ಸ್ ಜಾರಿಗೊಳಿಸಿದೆ. ಇದಕ್ಕೂ ಮೊದಲಿನ ಎಲ್ಲಾ ಏಳು ಸಮನ್ಸ್ ಗಳನ್ನು ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಉಲ್ಲಂಘಿಸಿದ್ದರು.
ವಿಚಾರಣೆಗೆ ಮಾರ್ಚ್ 4ರಂದು ತನ್ನೆದುರು ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯವು ಕೇಜ್ರಿವಾಲ್ ಗೆ ಸೂಚಿಸಿದೆ.
ಸೋಮವಾರ ಕೇಜ್ರಿವಾಲ್ ಏಳನೇ ಸಮನ್ಸ್ ಉಲ್ಲಂಘಿಸಿದ್ದಾರೆ. ಅನುಷ್ಠಾನ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಆದೇಶ ನೀಡಿದರೆ ಮಾತ್ರ ತಾನು ವಿಚಾರಣೆಗೆ ಹಾಜರಾಗುವುದಾಗಿ ಅವರು ಹೇಳಿದ್ದಾರೆ.
ಕೇಜ್ರಿವಾಲ್ ಕಳೆದ ಕೆಲವು ತಿಂಗಳುಗಳಿಂದ ತನ್ನ ಸಮನ್ಸ್ ಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವುದನ್ನು ಅನುಷ್ಠಾನ ನಿರ್ದೇಶನಾಲಯವು ಇತ್ತೀಚೆಗೆ ದಿಲ್ಲಿ ನ್ಯಾಯಾಲಯವೊಂದರಲ್ಲಿ ಪ್ರಶ್ನಿಸಿದೆ.
ಕೇಜ್ರಿವಾಲ್ ಗೆ ನೀಡಿರುವ ಏಳನೇ ಸಮನ್ಸ್ಗೆ ಪ್ರತಿಕ್ರಿಯಿಸಿದ್ದ ಆಮ್ ಆದ್ಮಿ ಪಾರ್ಟಿಯು, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದಿಂದ ಹೊರಬರುವಂತೆ ಆಮ್ ಆದ್ಮಿ ಪಕ್ಷದ ಮೇಲೆ ಒತ್ತಡ ಹೇರುವುದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪದೇ ಪದೇ ಸಮನ್ಸ್ ಗಳನ್ನು ಕಳುಹಿಸುತ್ತಿದೆ ಎಂದು ಹೇಳಿತ್ತು.
‘‘ಈ ವಿಷಯವು ಈಗ ನ್ಯಾಯಾಲಯದಲ್ಲಿದೆ. ಮುಂದಿನ ವಿಚಾರಣೆ ಮಾರ್ಚ್ 16ರಂದು ನಡೆಯಲಿದೆ. ಇಂಥ ಸಮನ್ಸ್ ಗಳನ್ನು ಪ್ರತಿದಿನ ಕಳುಹಿಸುವ ಬದಲು ಅನುಷ್ಠಾನ ನಿರ್ದೇಶನಾಲಯವು ನ್ಯಾಯಾಲಯದ ಆದೇಶಕ್ಕೆ ಕಾಯಬೇಕು. ನಾವು ‘ಇಂಡಿಯಾ’ ಮೈತ್ರಿಕೂಟದಿಂದ ಹೊರಬರುವುದಿಲ್ಲ. ಅದಕ್ಕಾಗಿ ಕೇಂದ್ರ ಸರಕಾರವು ನಮ್ಮ ಮೇಲೆ ಈ ರೀತಿಯಲ್ಲಿ ಒತ್ತಡವನ್ನು ಹೇರಬಾರದು’’ ಎಂದು ಅದು ಹೇಳಿತ್ತು.
ಅನುಷ್ಠಾನ ನಿರ್ದೇಶನಾಲಯದ ಸಮನ್ಸ್ ಗಳು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂಬುದಾಗಿ ಬಣ್ಣಿಸಿರುವ ಕೇಜ್ರಿವಾಲ್, ಕಳೆದ ವರ್ಷದ ನವೆಂಬರ್ 2, ಡಿಸೆಂಬರ್ 22, ಈ ವರ್ಷದ ಜನವರಿ 3, ಜನವರಿ 18, ಫೆಬ್ರವರಿ 2 ಮತ್ತು ಫೆಬ್ರವರಿ 19 ಮತ್ತು ಫೆಬ್ರವರಿ 26ರಂದು ವಿಚಾರಣೆಗೆ ಹಾಜರಾಗಿಲ್ಲ.
‘‘ಮುಖ್ಯಮಂತ್ರಿ ನ್ಯಾಯಾಲಯಕ್ಕೆ ಹೋಗಿಲ್ಲ. ಅನುಷ್ಠಾನ ನಿರ್ದೇಶನಾಲಯ ಹೋಗಿದೆ. ಅವರು ಯಾಕೆ ನ್ಯಾಯಾಲಯದ ಆದೇಶಕ್ಕೆ ಕಾಯುವುದಿಲ್ಲ? ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಇಲ್ಲಿ ಕಾನೂನು ಸಮ್ಮತ ಅಥವಾ ಕಾನೂನು ಬಾಹಿರ ಎನ್ನುವುದು ಏನೂ ಇಲ್ಲ. ನಮಗೆ ಕಿರುಕುಳ ನೀಡಲು ಅವರು ಬಯಸುತ್ತಿದ್ದಾರೆ, ಅಷ್ಟೆ. ಅನುಷ್ಠಾನ ನಿರ್ದೇಶನಾಲಯವು ಕಾನೂನಿಗೆ ಮಾನ್ಯತೆ ಕೊಡುವುದಾಗಿದ್ದರೆ, ಸಂಪೂರ್ಣ ಕಾನೂನು ಪ್ರಕ್ರಿಯೆ ನಡೆಯುವವರೆಗೆ ಅದು ಕಾಯುತ್ತಿತ್ತು’’ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ಹೇಳಿದ್ದಾರೆ.







