ಸಿರಿಯಾದಲ್ಲಿ ಇರಾನ್ ಸಂಪರ್ಕ ತಾಣದ ಮೇಲೆ ಅಮೆರಿಕ ವಾಯುದಾಳಿ: 9 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ (ndtv.com)
ವಾಷಿಂಗ್ಟನ್: ಅಮೆರಿಕದ ಯದ್ಧವಿಮಾನಗಳು ಪೂರ್ವ ಸಿರಿಯಾದಲ್ಲಿ ಇರಾನ್ ಸಂಬಂಧದ ಶಸ್ತ್ರಾಸ್ತ್ರ ದಾಸ್ತಾನು ಸೌಲಭ್ಯದ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಸಿಬ್ಬಂದಿಯ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಪ್ರಕಟಿಸಿದ್ದಾರೆ.
ಸಿರಿಯಾದ ಮೇಲೆ ಅಮೆರಿಕ ದಾಳಿ ನಡೆಸುತ್ತಿರುವುದು ಕಳೆದ ಎರಡು ವಾರಗಳಲ್ಲಿ ಇದು ಎರಡನೇ ಬಾರಿ. ಇರಾನ್ ಜತೆ ಸಂಬಂಧ ಹೊಂದಿದ ಪ್ರದೇಶಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಮೆರಿಕನ್ ಪಡೆಗಳ ಮೇಲೆ ವಿವಿಧ ಸಂಘಟನೆಗಳಿಂದ ನಡೆಯುತ್ತಿರುವ ದಾಳಿಗೆ ಇರಾನ್ ಕುಮ್ಮಕ್ಕು ನೀಡುತ್ತಿದೆ ಎನ್ನುವುದು ಅಮೆರಿಕದ ಆರೋಪ.
ಇರಾನ್ ಹಾಗೂ ಇರಾನ್ ಸೋಗಿನಲ್ಲಿರುವ ಸಂಘಟನೆಗಳು ಇಸ್ರೇಲ್-ಹಮಾಸ್ ಯುದ್ಧವನ್ನು ಪ್ರಾದೇಶಿಕ ಕದನವಾಗಿ ಮಾರ್ಪಡಿಸುವ ಪ್ರಯತ್ನವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯಾಚರಣೆ ನಡೆಸಿದ್ದು, ಪದೇ ಪದೇ ಇರಾನ್ ಮೇಲೆ ದಾಳಿ ಮಾಡುವ ಅಮೆರಿಕದ ಕ್ರಮ ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಅಪಾಯ ಎದುರಾಗಿದೆ.
"ಅಮೆರಿಕದ ಪಡೆಗಳು ಇರಾನಿನ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾಪ್ಸ್ ಮತ್ತು ಸಂಬಂಧಿತ ಗುಂಪುಗಳು ಬಳಸುತ್ತಿದ್ದ ಪೂರ್ವ ಸಿರಿಯಾದ ಶಸ್ತಾಸ್ತ್ರ ಸಂಗ್ರಹಾಗಾರದ ಮೇಲೆ ಆತ್ಮರಕ್ಷಣೆ ದಾಳಿ ನಡೆಸಿವೆ. ಅಮೆರಿಕದ ಎಫ್-15 ವಿಮಾನಗಳ ಮೂಲಕ ದಾಳಿ ನಡೆದಿದೆ” ಎಂದು ಆಸ್ಟಿನ್ ಹೇಳಿಕೆ ನೀಡಿದ್ದಾರೆ







