ದಿಲ್ಲಿಯಲ್ಲಿ 92 ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 92 ಬಾಂಗ್ಲಾದೇಶಿ ರಾಷ್ಟ್ರೀಯರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ನೈರುತ್ಯ ದಿಲ್ಲಿಯಲ್ಲಿ ನಡೆಸಲಾದ ವಿಶೇಷ ಅಭಿಯಾನದ ವೇಳೆ, ಎರಡು ಕಾರ್ಯಾಚರಣೆಗಳಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಇದರೊಂದಿಗೆ, 2024 ಡಿಸೆಂಬರ್ 26ರಿಂದೀಚೆಗೆ ಈ ಜಿಲ್ಲೆಯಲ್ಲಿ ಬಂಧಿಸಲಾಗಿರುವ ಬಾಂಗ್ಲಾದೇಶಿ ರಾಷ್ಟ್ರೀಯರ ಸಂಖ್ಯೆ 142ಕ್ಕೇರಿದೆ.
ಅಕ್ರಮವಾಗಿ ವಾಸಿಸುತ್ತಿರುವ ವಿದೇಶೀಯರನ್ನು ಗುರುತಿಸಿ ಬಂಧಿಸಲು ನೈರುತ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇತ್ತೀಚೆಗೆ 10 ದಿನಗಳ ವಿಶೇಷ ಅಭಿಯಾನವೊಂದನ್ನು ನಡೆಸಲಾಯಿತು ಎಂದು ಪೊಲೀಸರು ತಿಳಿಸಿದರು.
ಗುಪ್ತಚರ ಮಾಹಿತಿಗಳು ಮತ್ತು ಸ್ಥಳೀಯ ಮಾಹಿತಿದಾರರ ಸೂಚನೆಗಳ ಆಧಾರದಲ್ಲಿ ತಂಡಗಳು ಹಲವು ಪ್ರದೇಶಗಳಲ್ಲಿ ಮನೆ-ಮನೆ ತಪಾಸಣೆ ನಡೆಸಿದವು.
‘‘ಅಭಿಯಾನದ ವೇಳೆ, ಸರೋಜಿನಿ ನಗರ, ಕಿಶನ್ಗಢ, ಸಫ್ದರ್ಜಂಗ್ ಎನ್ಕ್ಲೇವ್, ವಸಂತ್ ಕುಂಜ, ಕಪಶೇರ, ಪಾಲಮ್ ಗ್ರಾಮ, ದಿಲ್ಲಿ ಕಂಟೋನ್ಮೆಂಟ್ ಮತ್ತು ಸಾಗರ್ಪುರ ಮುಂತಾದ ಪ್ರದೇಶಗಳಿಂದ 88 ಬಾಂಗ್ಲಾದೇಶಿ ರಾಷ್ಟ್ರೀಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು’’ ಎಂದು ಉಪ ಪೊಲೀಸ್ ಕಮಿಶನರ್ ಸುರೇಂದ್ರ ಚೌಧರಿ ಹೇಳಿಕೆಯೊಂದರಲ್ಲಿ ತಿಳಿಸಿದರು.
ಇನ್ನೊಂದು ಕಾರ್ಯಾಚರಣೆಯಲ್ಲಿ, ತಂಡಗಳು ಒಂದು ಬಾಂಗ್ಲಾದೇಶಿ ದಂಪತಿ ಮತ್ತು ಅವರ ಇಬ್ಬರು ಮಕ್ಕಳನ್ನು ದಿಲ್ಲಿ ಕಂಟೋನ್ಮೆಂಟ್ ಪ್ರದೇಶದಿಂದ ವಶಕ್ಕೆ ತೆಗೆದುಕೊಂಡಿವೆ.







