ದಿಲ್ಲಿಯ ಆಶ್ರಯಧಾಮದಲ್ಲಿ ಬಾಲಕನಿಗೆ ಲೈಂಗಿಕ ದೌರ್ಜನ್ಯ

ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ದಿಲ್ಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿಯ ಖಾಸಗಿ ಆಶ್ರಯ ಧಾಮದಲ್ಲಿ ಬಾಲಕನೋರ್ವನ ಮೇಲೆ ಅಲ್ಲಿಯ ಇನ್ನೋರ್ವ ನಿವಾಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಾಲಕನನ್ನ್ನು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ದಿಲ್ಲಿ ಮಹಿಳಾ ಆಯೋಗವು ದಿಲ್ಲಿ ಪೊಲೀಸರಿಗೆ ನೋಟಿಸ್ ಹೊರಡಿಸಿದ್ದು, ಎಫ್ಐಆರ್ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿದೆ. ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡುವಲ್ಲಿ ವಿಫಲಗೊಂಡಿದ್ದ ಮ್ಯಾನೇಜರ್ ಮತ್ತು ಇತರ ಸಿಬ್ಬಂದಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆಯೇ ಎಂದು ತಿಳಿಯಲೂ ಅದು ಬಯಸಿದೆ.
ಸೆ.6ರೊಳಗೆ ಕ್ರಮಕೈಗೊಂಡಿರುವ ಕುರಿತು ವರದಿಯನ್ನು ಸಲ್ಲಿಸುವಂತೆ ಆಯೋಗವು ಪೊಲೀಸರಿಗೆ ಸೂಚಿಸಿದೆ.
ಸೆ.2ರಂದು ಘಟನೆಯ ಬಗ್ಗೆ ಆಯೋಗದ ಮಹಿಳಾ ಸಹಾಯವಾಣಿಗೆ ಕರೆ ಬಂದಿತ್ತು ಎಂದು ನೋಟಿಸ್ನಲ್ಲಿ ತಿಳಿಸಲಾಗಿದ್ದು,ತನ್ನ ತಾಯಿಯ ನಿಧನ ಮತ್ತು ತಂದೆಯ ಮರುವಿವಾಹದ ಬಳಿಕ ಬಾಲಕ ಕಳೆದ ಕೆಲವು ವರ್ಷಗಳಿಂದ ಆಶ್ರಯಧಾಮದಲ್ಲಿ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ. ಆ.31ರಂದು ಸಂಜೆ ತಾನು ಟಾಯ್ಲೆಟಿಗೆ ಹೋಗಿದ್ದಾಗ ಆಶ್ರಯಧಾಮದಲ್ಲಿಯ ಹಿರಿಯ ಹುಡುಗನೋರ್ವ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಬಾಲಕ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಆಶ್ರಯಧಾಮದ ಮ್ಯಾನೇಜರ್ಗೆ ತಾನು ತಿಳಿಸಿದ್ದೆ, ಆದರೆ ಅವರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಬಾಲಕ ಆರೋಪಿಸಿದ್ದಾನೆ ಎಂದು ಆಯೋಗವು ತಿಳಿಸಿದೆ.







