ಪುಣೆ ಫಿಲಂ ಇನ್ಸ್ಟಿಟ್ಯೂಟ್ ನ 7 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

FTII
ಹೊಸದಿಲ್ಲಿ : ಬಾಬರಿ ಮಸೀದಿಯನ್ನು 1992ರಲ್ಲಿ ಧ್ವಂಸಗೊಳಿಸಿರುವುದನ್ನು ಖಂಡಿಸಿದ ಬ್ಯಾನರ್ ಕುರಿತಂತೆ ಸಂಘ ಪರಿವಾರದ ಕಾರ್ಯಕರ್ತರು ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII)ದ ಕ್ಯಾಂಪಸ್ ಗೆನುಗ್ಗಿದ ಹಾಗೂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ, ಒಂದು ದಿನದ ಬಳಿಕ ವಿದ್ಯಾರ್ಥಿ ಸಂಘಟನೆಯ 7 ಸದಸ್ಯರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಬ್ಯಾನರ್ ಪ್ರದರ್ಶಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಹಾಗೂ ಇದು ಸಾಮಾಜಿಕ ಏಕತೆಯ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಈ ಬ್ಯಾನರ್ ಪ್ರದರ್ಶಿಸಲಾಗಿದೆ ಎಂದು ಕೂಡ ದೂರಿನಲ್ಲಿ ಆರೋಪಿಸಲಾಗಿದೆ.
ಡೆಕ್ಕನ್ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಬಿಪಿನ್ ಹಸ್ಬಾನಿಸ್ ಅವರು ತನಿಖೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ಈ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 295ಎ ಹಾಗೂ 153ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊಥ್ರುಡ್ ನಿವಾಸಿಯಾಗಿರುವ ರಿತುಜಾ ಅತುಲ್ ಮಾನೆ ಡೆಕ್ಕನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅವರು ಸಮಸ್ತ ಹಿಂದೂ ಬಾಂಧವ ಸೋಷಿಯಲ್ ಆರ್ಗನೈಶೇಷನ್ ನನ ಮಹಿಳಾ ಅಧ್ಯಕ್ಷೆಯಾಗಿದ್ದಾರೆ.
ಎಫ್ಟಿಐಐ ಕ್ಯಾಂಪಸ್ನಲ್ಲಿ ‘ಬಾಬರಿ ನೆನಪಿಸಿಕೊಳ್ಳಿ, ಸಂವಿಧಾನದ ಸಾವು’ ಎಂಬ ಬರೆಹವುಳ್ಳ ಬ್ಯಾನರ್ ಪ್ರದರ್ಶಿಸಲಾಗಿದೆ ಎಂಬ ಮಾಹಿತಿಯನ್ನು ಮಂಗಳವಾರ ಅಪರಾಹ್ನ ಸ್ವೀಕರಿಸಲಾಗಿತ್ತು. ಬಳಿಕ ಮಾನೆ ಅವರು ಈ ಕುರಿತು ವಿದ್ಯಾರ್ಥಿ ಸಂಘಟನೆಯ ರವೀಂದ್ರ ಪಡ್ವಾಳ್ ಹಾಗೂ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ದಾಳಿಗೆ ಒಳಗಾದವರಲ್ಲಿ ಅಧ್ಯಕ್ಷರು ಕೂಡ ಸೇರಿದ್ದಾರೆ ಎಂದು ಎಫ್ಟಿಐಐ ವಿದ್ಯಾರ್ಥಿ ಸಂಘಟನೆ (ಎಫ್ಎಸ್ಎ) ಪ್ರತಿಪಾದಿಸಿದೆ.







