ಬುಡಕಟ್ಟು ಮಹಿಳೆಯ ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣ; ಪತಿ ಸೇರಿದಂತೆ ಮೂವರ ಬಂಧನ

ಸಾಂದರ್ಭಿಕ ಚಿತ್ರ.
ಜೈಪುರ: ಬುಡಕಟ್ಟು ಮಹಿಳೆಯನ್ನು ಆಕೆಯ ಪತಿ ಹಾಗೂ ಆತನ ಕುಟುಂಬ ಥಳಿಸಿದ ಹಾಗೂ ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ರಾಜಸ್ಥಾನದ ಪ್ರತಾಪ್ಗಢ ಜಿಲ್ಲೆಯಲ್ಲಿ ನಡೆದಿದೆ. ವೀಡಿಯೊ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
ನಿಚಲ್ಕೋಟ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ. ಪತ್ನಿಯ ಅನೈತಿಕ ಸಂಬಂಧ ಆರೋಪಿಸಿ ಪತಿ ಈ ಕೃತ್ಯ ಎಸಗಿದ್ದಾನೆ ಎಂದು ಧರಿಯಾವಾಡದ ಎಸ್ಎಚ್ಒ ಪೇಶಾವರ ಖಾನ್ ತಿಳಿಸಿದ್ದಾರೆ. ಘಟನೆ ವರದಿಯಾದ ಬಳಿಕ ನಾವು ಜಿಲ್ಲೆಯಲ್ಲಿ 6 ತಂಡಗಳನ್ನು ರಚಿಸಿದ್ದೇವೆ. ಸಂತ್ರಸ್ತೆಯ ಕಡೆಯಿಂದ ಕೂಡ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ ಒಟ್ಟು 10 ಮಂದಿಯ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪ್ರತಾಪ್ಗಢದ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ಹೇಳಿದ್ದಾರೆ. ಬಂಧಿತ ಆರೋಪಿಗಳನ್ನು ನಾಥು ಮೀನಾ (ಸಂತ್ರಸ್ತೆಯ ಪತಿ), ವೆಲಿಯ ವೀಣಾ ಹಾಗೂ ಕನ್ಹಾ ಮೀನಾ ಎಂದು ಗುರುತಿಸಲಾಗಿದೆ ಎಂದು ಬನ್ಸ್ವಾರ ಐಜಿ ಎಸ್. ಪರಿಮಳ್ ಹೇಳಿದ್ದಾರೆ.
ಪೊಲೀಸರನ್ನು ಕಂಡ ಕೂಡಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಈ ಸಂದರ್ಭ ಬಿದ್ದು ಗಾಯಗೊಂಡರು. ಅವರನ್ನು ಬಂಧಿಸಿ ಚಿಕಿತ್ಸೆಗಾಗಿ ಪ್ರತಾಪ್ಗಢ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಮಹಿಳೆ ಇನ್ನೋರ್ವ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದುದರಿಂದ ಆಕ್ರೋಶಗೊಂಡ ಪತಿಯ ಕುಟುಂಬವರು ಆಕೆಯನ್ನು ಅಪಹರಿಸಿ ತಮ್ಮ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿ ಪತಿ ಹಾಗೂ ಆಕೆಯ ಕುಟುಂಬ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದರು ಎಂದು ಡಿಜಿಪಿ ಉಮೇಶ್ ಮಿಶ್ರಾ ತಿಳಿಸಿದ್ದಾರೆ.
‘‘ಎಡಿಜಿ (ಅಪರಾಧ) ಅವರು ಅಪರಾಧದ ದೃಶ್ಯವನ್ನು ಕೂಡಲೇ ಕಳುಹಿಸಿದರು. ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾವು ಪೊಲೀಸರಿಗೆ ನಿರ್ದೇಶಿಸಿದ್ದೇವೆ. ನಾವು ಈ ಪ್ರಕರಣವನ್ನು ತ್ವರಿತ ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಲಿದ್ದೇವೆ’’
- ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ ಖಂಡನೆ:
ರಾಜಸ್ಥಾನದ ಪ್ರತಾಪ್ಗಢದಲ್ಲಿ ನಡೆದ ಘಟನೆಯನ್ನು ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ (NCW) ತೀವ್ರವಾಗಿ ಖಂಡಿಸುತ್ತದೆ. ಮಹಿಳೆಯೋರ್ವರಿಗೆ ಕಿರುಕುಳ ನೀಡಲಾಗಿದೆ, ಬೆತ್ತಲೆ ಮೆರವಣಿಗೆ ಮಾಡಲಾಗಿದೆ ಹಾಗೂ ಘಟನೆಯ ವೀಡಿಯೊವನ್ನು ದಾಖಲಿಸಲಾಗಿದೆ. ಈ ಘಟನೆ ನಡೆದು ಎರಡು ದಿನ ಕಳೆದರೂ ಪೊಲೀಸರ ನಿಷ್ಕ್ರಿಯತೆ ಸ್ವೀಕಾರಾರ್ಹವಲ್ಲ. ಶರ್ಮಾ ರೇಖಾ (ಎನ್ಸಿಡಬ್ಲು ಅಧ್ಯಕ್ಷೆ) ಆರೋಪಿಗಳನ್ನು ಬಂಧಿಸುವಂತೆ ಹಾಗೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಡಿಜಿಪಿಗೆ ಸೂಚಿಸಿದ್ದಾರೆ. ಐದು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ನಾವು ಆಗ್ರಹಿಸುತ್ತೇವೆ ಎಂದು NCW ‘ಎಕ್ಸ್’ (ಈ ಹಿಂದಿನ ಟ್ವಿಟರ್)ನಲ್ಲಿ ಹೇಳಿದೆ.







