ಆಮ್ ವೇ ವಿರುದ್ಧ ಬೃಹತ್ ಮೊತ್ತದ ಹಣ ದುರ್ಬಳಕೆ ಪ್ರಕರಣ

Photo: twitter.com/thetribunechd
ಹೈದರಾಬಾದ್: ಆಮ್ ವೇ ಇಂಡಿಯಾ ಎಂಟರ್ ಪ್ರೈಸಸ್ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯ ಪಿಎಂಎಲ್ಎ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದೆ. ಹೈದರಾಬಾದ್ ನ ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯ ಅದನ್ನು ಅದೇ ದಿನ ಪರಿಗಣಿಸಿದೆ.
ತೆಲಂಗಾಣ ಪೊಲೀಸರು ಆಮ್ ವೇ ಮತ್ತು ಅದರ ನಿರ್ದೇಶಕರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.
ಆಮ್ ವೇ, ಸರಕುಗಳನ್ನು ಮಾರಾಟ ಮಾಡುವ ನೆಪದಲ್ಲಿ ಅಕ್ರಮ ಹಣ ಪ್ರಸರಣ ಯೋಜನೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಲಾಗಿದ್ದು, ಹೊಸ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಸಲುವಾಗಿ ಸಾರ್ವಜನಿಕರಿಗೆ ಅತ್ಯಧಿಕ ಕಮಿಷನ್ ಮತ್ತು ಉತ್ತೇಜಕಗಳನ್ನು ಪ್ರಕಟಿಸುತ್ತಿದೆ ಎಂದು ದೂರಲಾಗಿದೆ.
ಆಮ್ ವೇ ನೇರ ಮಾರಾಟವನ್ನು ಮರೆ ಮಾಚಿ ಪಿರಮಿಡ್ ಸ್ಕೀಂ ನಿರ್ವಹಿಸುತ್ತಿದೆ. ಗ್ರಾಹಕರಿಗೆ ನೇರ ಸರಕುಗಳನ್ನು ಪೂರೈಸುವ ಬದಲು, ಆಮ್ ವೇ ಬಹು ಹಂತದ ಮಾರಾಟ ಯೋಜನೆಗಳ ಮೂಲಕ ಸದಸ್ಯರಿಗೆ ಮಧ್ಯವರ್ತಿಗಳ ಸಹಾಯದಿಂದ ಪೂರೈಸುತ್ತದೆ ಎಂದು ನಿರ್ದೇಶನಾಲಯ ಹೇಳಿದೆ.
ಆಮ್ ವೇ ಚಟುವಟಿಕೆಗಳು ಬಹು ಹಂತದ ಮಾರುಕಟ್ಟೆ ಯೋಜನೆ ಮತ್ತು ಹಣ ಪ್ರಸರಣ ಯೋಜನೆಯಾಗಿದ್ದು, ಈ ಅಪರಾಧದಿಂದ ಸುಮಾರು 4040.21 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಹೇಳಿದೆ. 2859 ಕೋಟಿ ರೂಪಾಯಿಗಲನ್ನು ಸದಸ್ಯರಿಂದ ಸಂಗ್ರಹಿಸಲಾಗಿದ್ದು, ಇದನ್ನು ಸಾಗರೋತ್ತರ ಹೂಡಿಕೆದಾರರ ಖಾತೆಗಳಿಗೆ ಲಾಭಾಂಶ, ರಾಜಧನ ಹಾಗೂ ಇತರ ವೆಚ್ಚಗಳ ಹೆಸರಿನಲ್ಲಿ ವರ್ಗಾಯಿಸಲಾಗಿದೆ ಎಂದು ದೂರಲಾಗಿದೆ.