ಕೊನೆಗೂ ಇತ್ಯರ್ಥವಾಗದ ವೈದ್ಯರಿಬ್ಬರ ನಡುವಿನ ʼಕೋಳಿʼ ಜಗಳ!

ಸಾಂದರ್ಭಿಕ ಚಿತ್ರ | Photo Credit : freepik
ಬಹಳಷ್ಟು ವೈದ್ಯರು ಸಣ್ಣ ವಿಚಾರಗಳ ಬಗ್ಗೆ ಜನರಲ್ಲಿ ಭಯ ಮೂಡಿಸುತ್ತಾರೆ. ಇಂತಹ ಪ್ರವೃತ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ ಡಾಕ್ಟರ್ ಫಿಲಿಪ್ಸ್. ಇದೀಗ ತಮಿಳುನಾಡಿನ ವೈದ್ಯರನ್ನು ಅವರು ಟೀಕಿಸುತ್ತಿರುವುದೇತಕ್ಕೆ? ಸಾಮಾಜಿಕ ಜಾಲತಾಣದಲ್ಲಿ ಸೈದ್ಧಾಂತಿಕವಾಗಿ ಬದಲಾದ ಚರ್ಚೆಯ ಮೂಲವೇನು?
ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ಇಬ್ಬರು ವೈದ್ಯರ ನಡುವೆ ಚಿಕನ್ ನಗೆಟ್ಸ್ ಮತ್ತು ಪಾಪ್ಕಾರ್ನ್ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಡಾ. ಪಾಲ್ ಎಂದೇ ಜನಜನಿತರಾಗಿರುವ ಡಾ ಪಳನಿಯಪ್ಪನ್ ಮನಿಕಾಮ್ ಮತ್ತು ಲಿವರ್ ಡಾಕ್ಟರ್ ಎಂದೇ ಪ್ರಸಿದ್ಧಿಪಡೆದ ಡಾ ಸಿರಿಯಾಕ್ ಅಬಿ ಫಿಲಿಪ್ಸ್ ನಡುವೆ ಈ ಚರ್ಚೆ ನಡೆದಿದೆ.
ಡಾ. ಪಾಲ್ ತಮ್ಮ ಕುಟುಂಬದ ಜೊತೆಗೆ ಚಿತ್ರಮಂದಿರಕ್ಕೆ ಹೋಗಿದ್ದಾಗ ತೆಗೆದಿದ್ದ ವೀಡಿಯೊ ಒಂದರಲ್ಲಿ “ಪಾಪ್ಕಾರ್ನ್ ಮತ್ತು ಚಿಕನ್ ನಗೆಟ್ಸ್ ಹೇಗೆ ಕರುಳಿನ ಆರೋಗ್ಯಕ್ಕೆ ಅಪಾಯಕಾರಿ” ಎಂದು ಹಾಸ್ಯಮಯವಾಗಿ ತಿಳಿಸಿದ್ದರು. ಲಿವರ್ ಡಾಕ್ಟರ್ ಈ ಕ್ಲಿಪ್ ಅನ್ನು ಹಂಚಿಕೊಂಡು “ಜನರ ನಡುವೆ ಆಹಾರದ ಬಗ್ಗೆ ಭಯ ಹರಡಬೇಡಿ” ಎಂದು ಹೇಳಿದ್ದರು. “ನಿಮ್ಮ ಸುಳ್ಳುಮಾಹಿತಿಯನ್ನು ಇನ್ಸ್ಟಾಗ್ರಾಂನಲ್ಲೇ ಹರಡಿ. ಅಪರೂಪಕ್ಕೊಮ್ಮೆ ಸಿನಿಮಾ ನೋಡಲು ಹೋದಾಗ ಪಾಪ್ಕಾರ್ನ್ ಅಥವಾ ಚಿಕಲ್ ನಗೆಟ್ಸ್ ತಿಂದರೆ ಕರುಳಿಗೆ ಏನೂ ಸಮಸ್ಯೆಯಾಗದು. ಇಂತಹ ಸುಳ್ಳನ್ನು ಹರಡುವುದು ನಿಲ್ಲಿಸಿ” ಎಂದು ಫಿಲಿಪ್ಸ್ ಹೇಳಿದ್ದರು.
ಅದಕ್ಕೆ ಉತ್ತಿರಿಸಿದ ಡಾ ಪಾಲ್, “ಫಿಲಿಪ್ಸ್ ಅವರು ನೆಗೆಟಿವಿಟಿ ಹರಡುವ ಬದಲಾಗಿ ಜನರನ್ನು ಶಿಕ್ಷಿತರನ್ನಾಗಿಸಬೇಕು ಎಂದು ಸಲಹೆ ನೀಡಿದರು. ಅವರು ತಮ್ಮ ವೀಡಿಯೊವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿ, “ಸರಳವಾಗಿ ಸಂವಹನ ಮಾಡಲು ಹಾಸ್ಯಮಯ ವೀಡಿಯೋ ಹಾಕಿರುವುದನ್ನು ತಪ್ಪರ್ಥ ಮಾಡಿಕೊಳ್ಳಲಾಗಿದೆ. ಹಾಸ್ಯಮಯ ರೀತಿಯಲ್ಲಿ ಜನರಿಗೆ ಅರ್ಥವಾಗುವಂತೆ ‘ಅತಿ ಸಂಸ್ಕರಿತ ಆಹಾರ ಸೇವಿಸಬಾರದು’ ಎನ್ನುವ ಸಂದೇಶಗಳನ್ನು ಹಾಕುತ್ತೇನೆ. ಇದನ್ನು ಪ್ರಮುಖ ಸಾರ್ವಜನಿಕ- ಆರೋಗ್ಯ ಮಂಡಳಿಗಳೂ ಬೆಂಬಲಿಸಿವೆ. ಲಿವರ್ ವೈದ್ಯರ ಟೀಕೆ ವಿಜ್ಞಾನವನ್ನು ಆಧರಿಸಿ ನೀಡಲಾಗಿಲ್ಲ” ಎಂದು ಬರೆದರು.
ತಮ್ಮ ದೀರ್ಘ ಬರಹದಲ್ಲಿ ಡಾ. ಪಾಲ್ ತಮ್ಮ ವೃತ್ತಿಪರ ವಿಶ್ವಾಸಾರ್ಹತೆಯನ್ನು ಸಮರ್ಥಿಸಿಕೊಂಡಿದ್ದಲ್ಲದೆ, “ಎರಡು ದಶಕಗಳ ಕಾಲ ವೈದ್ಯಕೀಯ ವೃತ್ತಿಯಲ್ಲಿರುವೆ. ಸಾಮಾಜಿಕ ಮಾಧ್ಯಮವನ್ನು ಹಣಕ್ಕಾಗಿ ಬಳಸುವುದಿಲ್ಲ, ಆನ್ಲೈನ್ ಅನ್ನು ಕೇವಲ ಜನರನ್ನು ಶಿಕ್ಷಿತರನ್ನಾಗಿಸಲು ಬಳಸುತ್ತೇನೆ” ಎಂದು ಹೇಳಿದ್ದರು. ಅವರು ತಮ್ಮ ಜೀವನಶೈಲಿ-ಆಧರಿತ ಕಾರ್ಯಕ್ರಮ ‘ನ್ಯೂಮಿ’ (Newme) ಬಗ್ಗೆ ಹಂಚಿಕೊಂಡು, “ಪೂರಕ ಔಷಧಿಗಳನ್ನು ನೀಡದೆ ಹವ್ಯಾಸಗಳು, ಪೌಷ್ಠಿಕತೆ, ನಿದ್ರೆ, ಚಲನೆ, ಒತ್ತಡ ಕಡಿಮೆ ಮಾಡುವುದು ಮತ್ತು ಬದ್ಧತೆಯ ಸಾಕ್ಷ್ಯವನ್ನು ಆಧರಿಸಿದ ರೂಪುರೇಷೆ” ಎಂದು ಮುಂದಿಟ್ಟಿದ್ದಾರೆ.
“ಬಹಳಷ್ಟು ಮಂದಿ ವೈಜ್ಞಾನಿಕ ವಿವರಣೆಗಳ ಮೇಲೆ ಸರಳವಾಗಿ ಹಾಸ್ಯಮಯವಾಗಿ ತಿಳಿ ಹೇಳಿದಾಗ ಅರ್ಥಮಾಡಿಕೊಳ್ಳುತ್ತಾರೆ. ಇದು ಜನರನ್ನು ಪ್ರಚೋದಿಸುವುದು ಅಲ್ಲ, ಬದಲಾಗಿ ಜನಸಾಮಾನ್ಯರಿಗೆ ಅರ್ಥವಾಗುವ ಸಂವಹನ ವಿಧಾನಗಳು” ಎಂದು ಬರೆದುಕೊಂಡಿದ್ದಾರೆ.
ಅವರು ಮುಂದುವರಿದು, ಈ ವರ್ಷ ಪ್ರತಿಷ್ಠಿತ ಹಳೆವಿದ್ಯಾರ್ಥಿ ಪ್ರಶಸ್ತಿಯನ್ನು ಗಳಿಸಿರುವುದಾಗಿ ವಿವರ ನೀಡಿ, ಫಿಲಿಪ್ಸ್ ಅವರ ತಂದೆ ಡಾ ಫಿಲಿಪ್ ಆಗಸ್ಟಿನ್ ರಿಂದ ಅದನ್ನು ಪಡೆದುಕೊಂಡಿರುವುದು ತಮ್ಮ ಉತ್ತಮ ಕೆಲಸಕ್ಕೆ ಸಾಕ್ಷಿ. ಈ ಪ್ರಶಸ್ತಿಯೇ ಆನ್ಲೈನ್ ಟೀಕೆಗಿಂತ ಹೆಚ್ಚು ಉತ್ತಮವಾಗಿ ತಮ್ಮ ವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಉತ್ತರವಾಗಿ ಫಿಲಿಪ್ಸ್ “ನಾನು ನನ್ನ ಬಗ್ಗೆ ಯಾರಿಗೂ ಏನೂ ಸಾಬೀತುಮಾಡುವ ಅಗತ್ಯವಿಲ್ಲ. ಧರ್ಮಾಂಧತೆ ಅಥವಾ ಧಾರ್ಮಿಕ ತಾರತಮ್ಯವನ್ನು ಯಾವುದೇ ರೂಪದಲ್ಲಿದ್ದರೂ ಬೆಂಬಲಿಸುವುದಿಲ್ಲ. ನಿತ್ಯದ ಆಹಾರದ ಮೇಲೆ ಭಯ ಮೂಡಿಸುವುದು ತಪ್ಪು” ಎನ್ನುವ ತಮ್ಮ ನಿರ್ಧಾರವನ್ನು ಒತ್ತಿ ಹೇಳಿದರು.
ಮಾತ್ರವಲ್ಲದೆ, ತಾನು ಆನ್ಲೈನ್ ನಲ್ಲಿ ವೈಯಕ್ತಿಕ ಟೀಕೆ ಅಥವಾ ನೆಗೆಟಿವಿಟಿ ಹರಡುತ್ತಿಲ್ಲ, ಬದಲಾಗಿ ತನ್ನ ಗುರಿ ಸಾರ್ವಜನಿಕ ಆರೋಗ್ಯ. ಜನರ ಗಮನಕ್ಕಾಗಿ ನಡೆಸುವ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ತಮ್ಮ ತಂದೆಯನ್ನು ಚರ್ಚೆಯ ನಡುವೆ ತರಬಾರದು ಎಂದೂ ಸಲಹೆ ನೀಡಿದ ಅವರು, “ನೀವು ಇಂತಹ ನೀಚತನಕ್ಕೆ ಇಳಿಯುತ್ತೀರಿ ಎನ್ನುವ ಅರಿವು ನನಗಿತ್ತು, ನಮ್ಮ ತಂದೆ ಒಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಜಠರಕರುಳಿನ ತಜ್ಞರಾಗಿ ಕಾಲೇಜಿನ ಆಮಂತ್ರಣದಿಂದ ಮುಖ್ಯ ಅತಿಥಿಯಾಗಿ ಹೋಗಿದ್ದಾರೆ. ನಿಮಗೆ ದೊರೆತಿರುವುದು ಉತ್ತಮ ಹಳೇ ವಿದ್ಯಾರ್ಥಿ ಪ್ರಶಸ್ತಿ. ಅವರಿಗೆ ಯಾರು ಪ್ರಶಸ್ತಿ ಸ್ವೀಕರಿಸುತ್ತಾರೆ ಎನ್ನುವ ಅರಿವೂ ಇರಲಿಲ್ಲ. ಜನಪ್ರಿಯತೆ ಹೆಚ್ಚಿಸಿಕೊಳ್ಳುವಂತಹ ಇಂತಹ ಕಾರ್ಯಕ್ರಮಕ್ಕೆ ನಾನು ಹೋಗುವುದೂ ಇಲ್ಲ. ನಿಮ್ಮ ಮೆದುಳುರಹಿತ ಬೆಂಬಲಿಗರ ಮುಂದೆ ಸಂತ್ರಸ್ತರೆಂದು ತೋರಿಸಿಕೊಳ್ಳುವ ಬದಲಾಗಿ ನೀವು ಸ್ವಂತಕ್ಕಾಗಿ ಇದನ್ನೆಲ್ಲ ಮಾಡುತ್ತೀರೋ ಅಥವಾ ಸಾರ್ವಜನಿಕರಿಗೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ನಾನು ನಿಮ್ಮಂತೆ ಸುಳ್ಳುಸುದ್ದಿ ಹರಡಿಸುವವರ ವಿರುದ್ಧ ಖಚಿತವಾಗಿ ಹೋರಾಡುತ್ತೇನೆ, ನಾನು ಸಾರ್ವಜನಿಕರ ಪರವಾಗಿ ಮಾತನಾಡುತ್ತೇನೆ ಮತ್ತು ನನ್ನ ರೋಗಿಗಳಿಗಾಗಿ ಕೆಲಸ ಮಾಡುತ್ತೇನೆ. ನೀವು ಜನರ ಸಂಶಯದಿಂದ ಹಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ” ಎಂದು ಉತ್ತರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆಯುರ್ವೇದಿಕ್ ಪದ್ಧತಿಯನ್ನು ಟೀಕಿಸಿರುವುದಕ್ಕಾಗಿ ಲಿವರ್ ವೈದ್ಯರ ಮೇಲೆ ಕೆಲವೊಂದು ಪ್ರಕರಣಗಳೂ ಭಾರತದಲ್ಲಿ ದಾಖಲಾಗಿವೆ. ಫಿಲಿಪ್ಸ್ ಈ ಹಿಂದೆ ನಯನ ತಾರ ಅವರು ದಾಸವಾಳ ಚಹಾದ ಬಗ್ಗೆ ಬರೆದುಕೊಂಡಿರುವುದನ್ನೂ ಪ್ರಶ್ನಿಸಿದ್ದರು. ಅವರು ಆನ್ಲೈನ್ನಲ್ಲಿ ಬಿಟ್ಟಿ ಸಲಹೆ ನೀಡುವ ಅನೇಕರ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿರುತ್ತಾರೆ.







