ದಿಲ್ಲಿಯಲ್ಲೊಂದು ಮಹಾ ಲೂಟಿ: ನಾಲ್ಕಂತಸ್ತಿನ ಕಟ್ಟಡದ ತಾರಸಿಗೆ ಕನ್ನ ಕೊರೆದು 25 ಕೋ.ರೂ.ಗಳ ಆಭರಣ ದೋಚಿದರು

Photo: NDTV
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಭೋಗಾಲ್ ಪ್ರದೇಶದಲ್ಲಿಯ ಜ್ಯುವೆಲ್ಲರಿ ಶೋರೂಮ್ಗೆ ನುಗ್ಗಿದ ಕನಿಷ್ಠ ಮೂವರು ಅಪರಿಚಿತ ವ್ಯಕ್ತಿಗಳು 25 ಕೋ.ರೂ.ವೌಲ್ಯದ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ. ಪ್ರಾಯಶಃ ಇದು ದಿಲ್ಲಿಯಲ್ಲಿ ವರದಿಯಾಗಿರುವ ಅತ್ಯಂತ ದೊಡ್ಡ ಲೂಟಿಯಾಗಿದೆ.
ಘಟನೆಯು ಪಕ್ಕಾ ಬಾಲಿವುಡ್ ಚಿತ್ರಗಳನ್ನು ದೃಶ್ಯಗಳನ್ನು ನೆನಪಿಸುವಂತಿದೆ. ನಾಲ್ಕಂತಸ್ತುಗಳ ಕಟ್ಟಡದ ತಾರಸಿಗೆ ಕನ್ನ ಕೊರೆದು ಶೋರೂಮ್ ಪ್ರವೇಶಿಸಿದ ಕಳ್ಳರು ಯಾವುದೇ ಕುರುಹುಗಳನ್ನು ಸಿಗದಂತೆ ಸಿಸಿಟಿವಿ ಕ್ಯಾಮರಾಗಳನ್ನು ಒಡೆದಿದ್ದಾರೆ. ಬಹುಶಃ ಗ್ಯಾಸ್ ಕಟರ್ ಬಳಸಿ ತಾರಸಿಗೆ ರಂಧ್ರ ಕೊರೆದ ಕಳ್ಳರು ನಾಲ್ಕನೇ ಅಂತಸ್ತಿಗೆ ಇಳಿದು ಅಲ್ಲಿಂದ ಮೆಟ್ಟಿಲುಗಳ ಮೂಲಕ ಸ್ಟ್ರಾಂಗ್ ರೂಮ್ ಇದ್ದ ತಳ ಅಂತಸ್ತಿಗೆ ತಲುಪಿ,ಅದರಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಮಳಿಗೆಗೆ ಪ್ರತಿ ಸೋಮವಾರ ರಜೆಯಿದ್ದು,ಮಂಗಳವಾರ ಬೆಳಿಗ್ಗೆ ಮಾಲಿಕರು ಬಂದು ನೋಡಿದಾಗಲೇ ಕಳ್ಳತನ ನಡೆದಿರುವುದು ಗೊತ್ತಾಗಿದೆ. ರವಿವಾರ ರಾತ್ರಿಯಿಂದ ಯಾವುದೇ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.





