ಮಹಾರಾಷ್ಟ್ರದಲ್ಲಿ ನಕಲಿ ಗೋರಕ್ಷಕರ ಲಾಬಿಯು ರೈತರಿಗೆ ಕಿರುಕುಳ ನೀಡುತ್ತಿದೆ: ಬಿಜೆಪಿ ಶಾಸಕ ಆರೋಪ

ಬಿಜೆಪಿ ಶಾಸಕ ಸದಾಶಿವ ಖೋತ್ |PC : Instagram/sadabhaukhot
ಮುಂಬೈ: ಮಹಾರಾಷ್ಟ್ರದಲ್ಲಿ ನಕಲಿ ಗೋರಕ್ಷಕರ ಲಾಬಿಯು ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಬಿಜೆಪಿ ಶಾಸಕ ಸದಾಶಿವ ಖೋತ್ ಆರೋಪಿಸಿದ್ದು, ಇದಕ್ಕೆ ಅವರ ಸ್ವಂತ ಪಕ್ಷದಿಂದಲೇ ಟೀಕೆ ವ್ಯಕ್ತವಾಗಿದೆ ಎಂದು indianexpress.com ವರದಿ ಮಾಡಿದೆ.
ಖೋತ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ತನ್ನ ರಾಜಕೀಯ ಗುರುವನ್ನಾಗಿ ಪರಿಗಣಿಸುತ್ತಾರೆ. ಆದರೆ ರೈತ ನಾಯಕ ಶರದ್ ಜೋಶಿಯವರನ್ನು ತನ್ನ ಕೃಷಿ ಗುರುವನ್ನಾಗಿ ಗೌರವಿಸುತ್ತಾರೆ.
1990ರ ದಶಕದ ಉತ್ತರಾರ್ಧದಲ್ಲಿ ಜೋಶಿಯವರು ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ,1976ನ್ನು ರದ್ದುಗೊಳಿಸುವ ಅಗತ್ಯದ ಬಗ್ಗೆ ಬರೆದಿದ್ದರು. ಈ ಕಾನೂನು ಕೃಷಿ ಆರ್ಥಿಕತೆಗೆ ಬೆದರಿಕೆಯಾಗಿದ್ದು, ಅದಕ್ಕೆ ತಿದ್ದುಪಡಿಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದರು.
ತಮ್ಮ ಜಾನುವಾರುಗಳನ್ನು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಅಧಿಕಾರವನ್ನು ರೈತರೇ ಹೊಂದಿರಬೇಕು ಎಂದು ಜೋಶಿ ವಾದಿಸಿದ್ದರು ಎಂದು ಖೋತ್ ಒತ್ತಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಜಾನುವಾರು ವ್ಯಾಪಾರಿಗಳು ಮತ್ತು ಸಾಂಪ್ರದಾಯಿಕ ಕಸಾಯಿಗಳು ಒಂದು ತಿಂಗಳಿಗೂ ಅಧಿಕ ಸಮಯದಿಂದ ಸ್ವಘೋಷಿತ ಗೋರಕ್ಷಕರಿಂದ ಕಿರುಕುಳವನ್ನು ವಿರೋಧಿಸಿ ಮುಷ್ಕರ ನಡೆಸುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೂ ಸ್ವಘೋಷಿತ ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಆದೇಶಿಸಿದ್ದಾರೆ.
ಸಾಂಪ್ರದಾಯಿಕವಾಗಿ ಜಾನುವಾರು ವ್ಯಾಪಾರ ಮತ್ತು ಕಸಾಯಿ ವೃತ್ತಿಯಲ್ಲಿರುವರನ್ನು ಪ್ರತಿನಿಧಿಸುವ ಮಹಾರಾಷ್ಟ್ರ ಖುರೇಷಿ ಸಂಘವು ಮುಷ್ಕರ ಆರಂಭಿಸಿದ ದಿನದಿಂದಲೇ ಅವರ ಪ್ರತಿಭಟನೆಯ ಕುರಿತೂ ಮಾತನಾಡುತ್ತಿರುವ ಖೋತ್, ಕಸಾಯಿ ವೃತ್ತಿ ಮತ್ತು ಜಾನುವಾರು ವ್ಯಾಪಾರವನ್ನು ನಿಲ್ಲಿಸುವುದರಿಂದ ರೈತರು ಮತ್ತು ಅವರ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂದು ವಾದಿಸುತ್ತಿದ್ದಾರೆ.
ರಾಜ್ಯದ ಸಾಂಗ್ಲಿ ಜಿಲ್ಲೆಗೆ ಸೇರಿದ ಖೋತ್ ಕಳೆದ 30 ವರ್ಷಗಳಿಂದಲೂ ಕೃಷಿ ಸಮಸ್ಯೆಗಳು, ವಿಶೇಷವಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದಾರೆ. 2016ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದ ಅವರು ಫಡ್ನವೀಸ್ ಅವರ ಮೊದಲ ಅಧಿಕಾರಾವಧಿಯಲ್ಲಿ ಕೃಷಿ ಸಚಿವರಾಗಿದ್ದರು.
ಗೋ ಹತ್ಯೆ ನಿಷೇಧ ಕಾನೂನಿಗೆ ಖೋತ್ ಅವರ ವಿರೋಧ ಬಿಜೆಪಿಯೊಳಗೆ ಹಲವರು ಹುಬ್ಬೇರಿಸುವಂತೆ ಮಾಡಿದೆ ಎಂದು indianexpress.com ವರದಿ ಮಾಡಿದೆ.
ಖೋತ್ ಅವರ ವಾದವು ಹಾಲು ವ್ಯಾಪಾರದ ಲೆಕ್ಕಾಚಾರವನ್ನು ಆಧರಿಸಿದೆ. ಜಾನುವಾರುಗಳಿಗೆ ಮೇವು ಒದಗಿಸಲು ದಿನಕ್ಕೆ 300 ರೂ.ವೆಚ್ಚವಾಗುತ್ತದೆ. ಅವು ಹಾಲು ನೀಡಲು ಆರಂಭಿಸಿದ ಬಳಿಕ ಪ್ರತಿ ದಿನ 15 ಲೀ.ಹಾಲು ಉತ್ಪಾದನೆಯನ್ನು ಪರಿಗಣಿಸಿದರೆ ಪ್ರತಿ ಲೀ.ಗೆ 35 ರೂ.ದರದಲ್ಲಿ ಬಳಿಕ ಅವುಗಳಿಂದ ಪ್ರತಿ ದಿನ 450 ರೂ.ಆದಾಯ ಲಭಿಸುತ್ತದೆ. ಇದು ಸರಳವಾದ ಲೆಕ್ಕಾಚಾರವಾಗಿದೆ. ಜಾನುವಾರು ಸುಮಾರು ಎರಡು ವರ್ಷವಾದ ನಂತರ ಹಾಲು ನೀಡಲು ಆರಂಭಿಸುತ್ತದೆ. ಅದು ಎರಡು ವರ್ಷಕ್ಕೂ ಕಡಿಮೆ ವಯಸ್ಸಿನದಾಗಿದ್ದರೆ ಅಥವಾ ಅದು ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಅದಕ್ಕಾಗಿ ಮಾಡುವ ವೆಚ್ಚವು ನಿಷ್ಕ್ರಿಯ ಹೂಡಿಕೆಯಾಗುತ್ತದೆ ಮತ್ತು ಯಾವುದೇ ಪ್ರತಿಫಲವನ್ನು ನೀಡುವುದಿಲ್ಲ. ಹೀಗಾಗಿ ಅವುಗಳನ್ನು ಮಾರುವುದು ಬಿಟ್ಟು ರೈತರಿಗೆ ಅನ್ಯಮಾರ್ಗವಿಲ್ಲ ಎಂದು ಹೇಳಿದ ಖೋತ್, ಒಬ್ಬ ರೈತ ಜಾನುವಾರನ್ನು ಸ್ಥಿರ ಠೇವಣಿಯನ್ನಾಗಿ ಪರಿಗಣಿಸುತ್ತಾನೆ. ಅವು ಪ್ರೌಢ ವಯಸ್ಸಿಗೆ ಬಂದ ಬಳಿಕ ಮಾರಾಟ ಮಾಡಿ ತನ್ನ ಹೂಡಿಕೆಯ ಮೇಲೆ ಲಾಭ ಗಳಿಸುತ್ತಾನೆ. ಆದರೆ ಸ್ವಘೋಷಿತ ಗೋರಕ್ಷಕರಿಂದಾಗಿ ಇಂತಹ ಮಾರಾಟಕ್ಕೆ ಈಗ ಹೊಡೆತ ಬಿದ್ದಿದೆ ಎನ್ನುತ್ತಾರೆ.
ಪುಣೆಯ ಗೋಶಾಲೆಯಲ್ಲಿ ತನ್ನ ಮತ್ತು ತನ್ನ ಬೆಂಬಲಿಗರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಸೋಮವಾರ ತಾನು ಪೋಲಿಸ್ ದೂರನ್ನು ದಾಖಲಿಸಿದ್ದೇನೆ ಎಂದೂ ಖೋತ್ ತಿಳಿಸಿದರು.







