ಎರಡು ಗಂಟೆಗಳ ಕಾಲ ಮಾಧ್ಯಮ ಸಂಸ್ಥೆಯೊಂದನ್ನು ನಿಂದಿಸಲು ಅನುಮತಿ ಕೋರಿದ ಉತ್ತರ ಪ್ರದೇಶದ ವ್ಯಕ್ತಿ!
ಸಾಂದರ್ಭಿಕ ಚಿತ್ರ | Photo: indiatoday.in
ಲಕ್ನೋ: ಪ್ರತಾಪಗಡದ ನಿವಾಸಿ ಪ್ರತೀಕ ಸಿನ್ಹಾ ಎಂಬವರು ಎರಡು ಗಂಟೆಗಳ ಕಾಲ ಮಾಧ್ಯಮ ಸಂಸ್ಥೆಯೊಂದನ್ನು ನಿಂದಿಸಲು ಸರಕಾರಿ ಅಧಿಕಾರಿಗಳಿಂದ ಅನುಮತಿ ಕೋರಿದ್ದಾರೆ. ಉತ್ತರ ಪ್ರದೇಶದ ಅಧಿಕಾರಿಗಳು ಇಂತಹ ಮನವಿಯೊಂದನ್ನು ಇದೇ ಮೊದಲ ಬಾರಿಗೆ ಸ್ವೀಕರಿಸಿದ್ದಾರೆ. ವೃತ್ತಪತ್ರಿಕೆಯು ತಾನು ಭೂ ಕಬಳಿಕೆಯಲ್ಲಿ ತೊಡಗಿದ್ದೇನೆ ಎಂದು ಆರೋಪಿಸಿದ ಬಳಿಕ ನೊಂದ ವ್ಯಕ್ತಿ ಈ ಮನವಿಯನ್ನು ಮಾಡಿಕೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ವೃತ್ತಪತ್ರಿಕೆ ಕಚೇರಿಯ ಹೊರಗೆ ಎರಡು ಗಂಟೆಗಳ ಕಾಲ ಧ್ವನಿವರ್ಧಕದಲ್ಲಿ ನಿಂದಿಸಲು ತನಗೆ ಅವಕಾಶ ನೀಡುವಂತೆ ಸಿನ್ಹಾ ಉಪವಿಭಾಗ ದಂಡಾಧಿಕಾರಿ (ಎಸ್ಡಿಎಂ)ಗಳಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
ವೃತ್ತಪತ್ರಿಕೆಯು ತನ್ನ ಲೇಖನದಲ್ಲಿ ಸಿನ್ಹಾರನ್ನು ‘ಭೂ ಮಾಫಿಯಾ’ ಎಂದು ಬಿಂಬಿಸಿತ್ತು. ಪತ್ರಿಕೆಗೆ ಮಾನನಷ್ಟ ನೋಟಿಸ್ ಅನ್ನು ಕಳುಹಿಸಿರುವ ಸಿನ್ಹಾ, ಅದನ್ನು ನಿಂದಿಸಲು ತಾನು ಬಯಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜ.9ರಂದು ತನ್ನ ಜಮೀನಿನಲ್ಲಿ ಯಾವುದೇ ಕಾರಣವಿಲ್ಲದೆ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಬಳಿಕ ವೃತ್ತಪತ್ರಿಕೆಯು ತನ್ನನ್ನು ‘ಮಾಫಿಯಾ’ ಎಂದು ಬಣ್ಣಿಸಿದೆ ಎಂದು ಹೇಳಿರುವ ಸಿನ್ಹಾ,ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಯಾವುದೇ ಆಧಾರವಿಲ್ಲ ಮತ್ತು ಇದು ತನ್ನ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ಲೇಖನವನ್ನು ವಿರೋಧಿಸಿ ಜ.15ರಂದು ಮಧ್ಯಾಹ್ನ 12 ಗಂಟೆಗೆ ಎರಡು ಗಂಟೆಗಳ ಕಾಲ ಬ್ಯೂರೊ ಮುಖ್ಯಸ್ಥರನ್ನು ಮತ್ತು ವರದಿಗಾರನನ್ನು ನಿಂದಿಸಲು ನಿಮ್ಮ ಅನುಮತಿ ಕೋರುತ್ತಿದ್ದೇನೆ ಎಂದು ಸಿನ್ಹಾ ಪತ್ರದಲ್ಲಿ ತಿಳಿಸಿದ್ದಾರೆ.
ಕುತೂಹಲಕಾರಿಯಾಗಿ, ಸಿನ್ಹಾ ತನ್ನ ಮನವಿ ಪತ್ರದಲ್ಲಿ ತಾನು ಹಿಂಸೆಯಲ್ಲಿ ತೊಡಗುವುದಿಲ್ಲ, ಬೆದರಿಕೆಯನ್ನೂ ಒಡ್ಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೀವ್ರ ಹಂಬಲವಿದ್ದರೂ ತಾನು ಅವರನ್ನು (ವೃತ್ತಪತ್ರಿಕೆಯ ಅಧಿಕಾರಿಗಳು) ಶೂಗಳಿಂದ ಥಳಿಸುವುದಿಲ್ಲ, ಅವರನ್ನು ಬೆದರಿಸುವುದೂ ಇಲ್ಲ ಎಂದು ಸಿನ್ಹಾ ಎಸ್ಡಿಎಮ್ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.