ಪರಿತ್ಯಕ್ತ ಗರ್ಭಿಣಿ ಬಾಲಕಿಯರಿಗೆ ಆಶ್ರಯ ನೀಡಲು ಹೊಸ ಯೋಜನೆ

Smriti Irani | PTI
ಹೊಸದಿಲ್ಲಿ: ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿರುವುದಕ್ಕಾಗಿ ಕುಟುಂಬಗಳಿಂದ ಹೊರದಬ್ಬಲ್ಪಟ್ಟಿರುವ ಅಪ್ರಾಪ್ತ ಬಾಲಕಿಯರಿಗೆ ಆಶ್ರಯ, ಆಹಾರ ಮತ್ತು ಕಾನೂನು ನೆರವು ನೀಡುವ ಯೋಜನೆಯೊಂದಕ್ಕೆ ಕೇಂದ್ರ ಸರಕಾರ ಸೋಮವಾರ ಚಾಲನೆ ನೀಡಿದೆ.
ಬೇರೆ ಯಾವುದೇ ಆಶ್ರಯವಿಲ್ಲದಿರುವ ಅಪ್ರಾಪ್ತ ಗರ್ಭಿಣಿ ಸಂತ್ರಸ್ತೆಯರಿಗೆ ಮೂಲಸೌಕರ್ಯ ಮತ್ತು ಆರ್ಥಿಕ ನೆರವು ಎರಡನ್ನೂ ನೀಡುವ ಗುರಿಯನ್ನು ನೂತನ ಯೋಜನೆ ಹೊಂದಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹೇಳಿದರು. ‘ನಿರ್ಭಯ’ ಯೋಜನೆಯ ಅಡಿಯಲ್ಲಿ ನೂತನ ಯೋಜನೆಯನ್ನು ರೂಪಿಸಲಾಗಿದೆ.
‘‘ಅಪ್ರಾಪ್ತ ಸಂತ್ರಸ್ತೆಯರಿಗೆ ನೀಡಲಾಗುವ ಈ ನೆರವನ್ನು ಅವರಿಗೆ ತಲುಪಿಸುವುದಕ್ಕಾಗಿ ರಾಜ್ಯ ಸರಕಾರಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳೊಂದಿಗೆ ಕೈಜೋಡಿಸಿ ‘ಮಿಶನ್ ವಾತ್ಯಲ್ಯ’ದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದ್ದೇವೆ’’ ಎಂದು ಸಚಿವೆ ತಿಳಿಸಿದರು.
2021ರಲ್ಲಿ ಜಾರಿಯಾಗಿರುವ ಮಿಶನ್ ವಾತ್ಸಲ್ಯವು ಮಕ್ಕಳ ರಕ್ಷಣೆ ಮತ್ತು ಕಲ್ಯಾಣಕ್ಕೆ ಗಮನ ನೀಡುತ್ತದೆ.
ಕಾನೂನು ನೆರವಿನ ಜೊತೆಗೆ, ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯಾಲಯದ ವಿಚಾರಣೆಗಳಲ್ಲಿ ಭಾಗವಹಿಸುವುದಕ್ಕಾಗಿ ಸುರಕ್ಷಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಇರಾನಿ ತಿಳಿಸಿದರು.







