ಬಿಹಾರ ವಿಧಾನಸಭಾ ಚುನಾವಣೆ | 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಂಐಎಂ

Photo: Ndtv
ಪಾಟ್ನಾ,ಅ.19: ಎಐಎಂಐಎಂ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ತನ್ನ 25 ಅಭ್ಯರ್ಥಿಗಳ ಪಟ್ಟಿಯನ್ನು ರವಿವಾರ ಬಿಡುಗಡೆಗೊಳಿಸಿದೆ.
‘ಬಿಹಾರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯ ಘಟಕವು ರಾಷ್ಟ್ರೀಯ ನಾಯಕತ್ವದೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಿದೆ. ನಾವು ಬಿಹಾರದಲ್ಲಿ ಅತ್ಯಂತ ಶೋಷಿತ ಜನರ ಧ್ವನಿಯಾಗುವ ಭರವಸೆಯನ್ನು ಹೊಂದಿದ್ದೇವೆ’ ಎಂದು ಎಐಎಂಐಎಂ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಈ ನಡುವೆ ಶನಿವಾರ ಕಾಂಗ್ರೆಸ್ ಐವರು ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅ.17ರಂದು ಅದು 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.
ಬಿಹಾರ ಚುನಾವಣೆಯ ಮೊದಲ ಹಂತಕ್ಕಾಗಿ ನಾಮಪತ್ರ ಸಲ್ಲಿಕೆ ಶುಕ್ರವಾರ ಅಂತ್ಯಗೊಂಡಿದ್ದು,ಅದಕ್ಕೂ ಮುನ್ನ ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸಲು ಮಹಾಘಟಬಂಧನ್ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಕೆಲವು ಕ್ಷೇತ್ರಗಳಲ್ಲಿ ಮಹಾಘಟಬಂಧನ್ನ ಅಂಗಪಕ್ಷಗಳು ಪರಸ್ಪರ ಎದುರಾಳಿಗಳಾಗುವ ಸಾಧ್ಯತೆಯಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆ ನ.6 ಮತ್ತು ನ.11ರಂದು ನಡೆಯಲಿದ್ದು,ನ.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.





