ಮಮತಾ ಬ್ಯಾನರ್ಜಿ, ಅಭಿಷೇಕ್ ಗೆ ಜೀವ ಬೆದರಿಕೆ ಒಡ್ಡುವ ಪೋಸ್ಟರ್ ಪತ್ತೆ

ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ | PC : PTI
ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜೀವ ಬೆದರಿಕೆ ಒಡ್ಡುವ ಪೋಸ್ಟರ್ ಪಶ್ಚಿಮ ಬಂಗಾಳದ ಹೌರಾಹ್ ಜಿಲ್ಲೆಯ ಉಲುಬೇರಿಯಾದಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಳಿ ತುಂಡು ಕಾಗದದಲ್ಲಿ ಹಸಿರು ಶಾಯಿಯಲ್ಲಿ ಕೈಬರೆಹದಲ್ಲಿ ಬರೆದಿರುವ ಪೋಸ್ಟರ್ ಮೇ 20ರಂದು ಲೋಕಸಭಾ ಚುನಾವಣೆಗಳು ನಡೆಯಲಿರುವ ಉಲುಬೇರಿಯಾದ ಫುಲೇಶ್ವರ್ ಪ್ರದೇಶದಲ್ಲಿರುವ ನಿರ್ಮಾಣ ನಿವೇಶನವೊಂದರಲ್ಲಿ ಪತ್ತೆಯಾಗಿದೆ.
‘‘ನಾನು ಕಾರು ಢಿಕ್ಕಿ ಹೊಡೆಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರನ್ನು ಹತ್ಯೆಗೈಯುತ್ತೇನೆ. ಅನಂತರ ಎಲ್ಲರೂ ದೀಪ ಹಚ್ಚಲಿದ್ದಾರೆ. ನನ್ನಲ್ಲಿ ರಹಸ್ಯ ಪತ್ರವಿದೆ’’ ಎಂದು ಪೋಸ್ಟರ್ ನಲ್ಲಿ ಬೆಂಗಾಳಿಯಲ್ಲಿ ಬರೆಯಲಾಗಿದೆ.
ರಹಸ್ಯ ಪತ್ರ ಅರ್ಥ ಏನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಇದು ತಮಾಷೆಗೆ ಹೇಳಿರಬಹುದು. ವ್ಯಕ್ತಿ ಅಥವಾ ಗುಂಪು ಇದರಲ್ಲಿ ಭಾಗಿಯಾಗಿದೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.





