ಉ.ಪ್ರ. ಆಸ್ಪತ್ರೆಯಲ್ಲಿ ಬಾಲಕಿ ಸಾವು: ಇಬ್ಬರು ವೈದ್ಯರ ವಿರುದ್ಧ ಮೊಕದ್ದಮೆ

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರಪ್ರದೇಶದ ಮೈನ್ಪುರಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಹೊರಗೆ 17 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ಇಬ್ಬರು ವೈದ್ಯರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ರಾಧಾ ಸ್ವಾಮಿ ಆಸ್ಪತ್ರೆಯ ವೈದ್ಯರಾದ ರವಿ ಯಾದವ್ ಮತ್ತು ನಿವಿತಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 304 (ಕೊಲೆಯಲ್ಲದ ಮಾನವ ಹತ್ಯೆ)ನೇ ವಿಧಿಯನ್ವಯ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ವಿನೋದ್ ಕುಮಾರ್ ಹೇಳಿದರು.
ಜ್ವರದಿಂದ ಬಳಲುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿನಿ ಭಾರತಿಯನ್ನು ಸೆಪ್ಟಂಬರ್ 26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ, ಆಸ್ಪತ್ರೆಯ ಸಿಬ್ಬಂದಿ ಬಾಲಕಿಯನ್ನು ಆಸ್ಪತ್ರೆಯಿಂದ ಹೊರಗೆ ಕರೆದುಕೊಂಡು ಹೋಗಿ ಆಕೆಯ ತಂದೆಯ ಮೋಟರ್ ಬೈಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಬಾಲಕಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಬಾಲಕಿಯನ್ನು ಬೇರೆ ಆಸ್ಪತ್ರೆಗೆ ಒಯ್ಯುವ ಕೆಲಸವನ್ನೂ ಅವರು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಅದೂ ಅಲ್ಲದೆ, ಆಸ್ಪತ್ರೆಯಲ್ಲಿ ಬಾಲಕಿಗೆ ತಪ್ಪು ಚಿಕಿತ್ಸೆಯನ್ನು ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.







