ಸಮಾನ ನಾಗರಿಕ ಸಂಹಿತೆಯು ಬಹುಸಂಖ್ಯಾತರ ಸಂಪ್ರದಾಯ ಹೇರಿಕೆಯಾಗಬಾರದು
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ

ಸಾಂದರ್ಭಿಕ ಚಿತ್ರ \ Photo: PTI
ಹೊಸದಿಲ್ಲಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ (UCC)ಯನ್ನು ಜಾರಿಗೊಳಿಸುವ ಪ್ರಯತ್ನದಲ್ಲಿ, ‘‘ಬಹುಸಂಖ್ಯಾತರ ಸಂಪ್ರದಾಯ’’ವು ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ವಾತಂತ್ರ ಮತ್ತು ಹಕ್ಕುಗಳ ಸ್ಥಾನವನ್ನು ಆಕ್ರಮಿಸಿಕೊಳ್ಳಬಾರದು ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಬುಧವಾರ ಕಾನೂನು ಆಯೋಗಕ್ಕೆ ಬರೆದ ಪತ್ರವೊಂದರಲ್ಲಿ ಹೇಳಿದೆ.
ಸಮಾನ ನಾಗರಿಕ ಸಂಹಿತೆಯು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರ ಮುಂತಾದ ವಿಷಯಗಳಲ್ಲಿ ಎಲ್ಲ ಭಾರತೀಯರಿಗೂ ಅನ್ವಯವಾಗುವಂಥ ಏಕರೂಪಿ ಕಾನೂನುಗಳನ್ನು ಒಳಗೊಂಡಿರುತ್ತದೆ. ಈಗ ಈ ವಿಷಯಗಳಲ್ಲಿ ವಿವಿಧ ಧಾರ್ಮಿಕ ಸಮುದಾಯಗಳು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿವೆ.
ಜೂನ್ 14ರಂದು, ಕಾನೂನು ಆಯೋಗವು ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ ನಾಗರಿಕರು ಮತ್ತು ಧಾರ್ಮಿಕ ಗುಂಪುಗಳಿಂದ ಅಭಿಪ್ರಾಯಗಳನ್ನು ಕೋರಿತ್ತು. ಅದಾಗಿ ಎರಡು ವಾರಗಳು ಕಳೆಯುವ ಮುನ್ನ, ಪ್ರಧಾನಿ ನರೇಂದ್ರ ಮೋದಿ ಸಮಾನ ನಾಗರಿಕ ಸಂಹಿತೆಯ ಪರವಾಗಿ ಧ್ವನಿಯೆತ್ತಿದರು. ‘‘ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ. ಬೇರೆ ಬೇರೆ ಸಮುದಾಯಗಳಿಗೆ ಬೇರೆ ಬೇರೆ ಕಾನೂನು ಎಂಬ ವ್ಯವಸ್ಥೆಯಡಿಯಲ್ಲಿ ದೇಶವನ್ನು ನಡೆಸುವುದು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.
ಸಮಾನ ನಾಗರಿಕ ಸಂಹಿತೆಯ ವ್ಯಾಪ್ತಿಯಿಂದ ಬುಡಕಟ್ಟು ಪಂಗಡಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರಗಿಡಬೇಕು ಎಂದು ಬುಧವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಒತ್ತಾಯಿಸಿದೆ.
‘‘ಈಗಾಗಲೇ ಚಾಲ್ತಿಯಲ್ಲಿರುವ, ಸಾಮಾನ್ಯ ಮತ್ತು ಏಕರೂಪಿಯಾಗಬೇಕಾಗಿದ್ದ ಕಾನೂನುಗಳೂ ಸಂಪೂರ್ಣವಾಗಿ ಏಕರೂಪಿಯಾಗಿಲ್ಲ. ಹಾಗಿರುವಾಗ, ಕೇವಲ ಏಕರೂಪಿ ಎಂಬುದಾಗಿ ಬಿಂಬಿಸುವುದು, ವಿವಿಧ ಧಾರ್ಮಿಕ ಸಮುದಾಯಗಳ ವೈಯಕ್ತಿಕ ವಿಷಯಗಳನ್ನು ನಿರ್ಧರಿಸುವ ಕಾನೂನುಗಳ ವ್ಯವಸ್ಥೆಯನ್ನು ಬುಡಮೇಲುಗೊಳಿಸುವುದಕ್ಕೆ ಸೂಕ್ತವಾದ ಕಾರಣವಾಗಿರುವುದಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
ಸಮಾನ ನಾಗರಿಕ ಸಂಹಿತೆಯು ಅಗತ್ಯವೂ ಅಲ್ಲ, ಬೇಕಾಗಿರುವುದೂ ಅಲ್ಲ ಎಂಬ ತೀರ್ಮಾನಕ್ಕೆ 21ನೇ ಕಾನೂನು ಆಯೋಗ ಬಂದಿತ್ತು ಎಂದು ಮುಸ್ಲಿಮ್ ಸಂಘಟನೆ ಹೇಳಿದೆ. ಈಗ, ಅದಾದ ಸ್ವಲ್ಪವೇ ಸಮಯದಲ್ಲಿ 22ನೇ ಕಾನೂನು ಆಯೋಗವು ‘‘ತಾನು ಏನು ಮಾಡಲು ಉದ್ದೇಶಿಸಿದ್ದೇನೆ ಎಂಬ ಯಾವುದೇ ನೀಲನಕಾಶೆ ಇಲ್ಲದೆ’’ ಮತ್ತೊಮ್ಮೆ ಸಾರ್ವಜನಿಕರ ಅಬಿಪ್ರಾಯವನ್ನು ಕೋರಿರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
‘‘ಈ ವಿಷಯವು ಸಂಪೂರ್ಣವಾಗಿ ಕಾನೂನಿಗೆ ಸಂಬಂಧಿಸಿದ್ದಾದರೂ, ಅದು ರಾಜಕಾರಣಿಗಳು ಮತ್ತು ಮಾಧ್ಯಮ-ಚಾಲಿತ ಸುಳ್ಳು ಸುದ್ದಿ ಅಭಿಯಾನಕ್ಕೆ ಮೇವು ಒದಗಿಸಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
‘‘ಮುಸ್ಲಿಮರ ವೈಯಕ್ತಿಕ ಸಂಬಂಧಗಳನ್ನು ಅವರ ವೈಯಕ್ತಿಕ ಕಾನೂನುಗಳು ನಿರ್ಧರಿಸುತ್ತವೆ. ಇವುಗಳು ಪವಿತ್ರ ಕುರ್ಆನ್ ಮತ್ತು ಇಸ್ಲಾಮಿಕ್ ಕಾನೂನುಗಳಿಂದ ನೇರವಾಗಿ ಬಂದಿವೆ ಹಾಗೂ ಅವುಗಳು ಮುಸ್ಲಿಮರ ಅಸ್ಮಿತೆಯೊಂದಿಗೆ ಬೆಸೆದುಕೊಂಡಿವೆ’’ ಎಂದು ಹೇಳಿಕೆ ತಿಳಿಸಿದೆ. ‘‘ತಮ್ಮ ಈ ಅಸ್ಮಿತೆಯನ್ನು ಕಳೆದುಕೊಳ್ಳಲು ಭಾರತದ ಮುಸ್ಲಿಮರು ಒಪ್ಪುವುದಿಲ್ಲ. ಇದಕ್ಕೆ ನಮ್ಮ ದೇಶದ ಸಂವಿಧಾನದಲ್ಲೇ ಅವಕಾಶವಿದೆ’’ ಎಂದು ಅದು ಹೇಳಿದೆ.







