ಕೆಂಪುಕೋಟೆ ಬಳಿ ಸ್ಫೋಟಕ್ಕೆ ಒಂದು ವಾರ: ಮೃತರ ಸಂಖ್ಯೆ 15ಕ್ಕೇರಿಕೆ

Photo Credit : ANI
ಹೊಸದಿಲ್ಲಿ: ಕಳೆದ ವಾರ ದಿಲ್ಲಿಯ ಕೆಂಪುಕೋಟೆ ಯ ಬಳಿ ಸಂಭವಿಸಿದ ಕಾರು ಬಾಂಬ್ ಸ್ಟೋಟ ಪ್ರಕರಣಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಾಂಬ್ ಸ್ಪೋಟದ ಬಳಿಕ ಸದಾ ಗ್ರಾಹಕರಿಂದ ಗಿಜಿಗಿಡುತ್ತಿದ್ದ ಚಾಂದಿನಿ ಚೌಕ್ ಬೀದಿಗಳು ಕುಂಟುತ್ತಾ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿವೆ. ಆದರೆ, ವ್ಯಕ್ತ ಮತ್ತು ಅವ್ಯಕ್ತ ಭೀತಿಯನ್ನು ಮಾತ್ರ ಇಲ್ಲಿ ಇನ್ನೂ ಕಾಣಬಹುದಾಗಿದೆ.
ವಿವಾಹ ಋತುವಾದ ಈ ಅವಧಿಯಲ್ಲಿ ಪ್ರತಿನಿತ್ಯ ವಧುವರರ ಜನದಟ್ಟಣೆಯಿಂದ ಗಿಜಿಗುಡುತ್ತಿದ್ದ ಇಲ್ಲಿನ ಅಂಗಡಿ ಮುಂಗಟ್ಟುಗಳು ಇತ್ತೀಚಿನ ಭೀಕರ ಘಟನೆಯಿಂದ ಸಾಧಾರಣ ಪ್ರಮಾಣದ ಗ್ರಾಹಕರನ್ನು ಮಾತ್ರ ಕಾಣುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ಚಾಂದಿನಿ ಚೌಕ್ ನ ಅತ್ಯಂತ ಜನಪ್ರಿಯ ವಧು ಅಲಂಕಾರ ಮಳಿಗೆಗಳ ಪೈಕಿ ಒಂದಾದ ಮಹಾರಾಣಿ ಕಲೆಕ್ಷನ್ ನಲ್ಲಿ ಸೇಲ್ಸ್ ಮನ್ ಆಗಿರುವ ಜಾವೇದ್ ಅಹ್ಮದ್, “ನಮ್ಮ ಮಳಿಗೆ ಇನ್ಸ್ಟಾಗ್ರಾಮ್ ನಲ್ಲಿ 1.2 ದಶಲಕ್ಷ ಫಾಲೋವರ್ಸ್ ಗಳನ್ನು ಹೊಂದಿದೆ. ಸಾಮಾನ್ಯವಾಗಿ ವಿವಾಹ ಋತುವಿನಲ್ಲಿ ನಮಗೆ ನಿಂತುಕೊಳ್ಳಲೂ ಅವಕಾಶ ದೊರೆಯುವುದಿಲ್ಲ ಹಾಗೂ ವಧುಗಳು ಸರತಿ ಸಾಲಿನಲ್ಲಿ ಕಾದು ನಿಂತಿರುತ್ತಾರೆ. ಒಂದು ವೇಳೆ ನೆಲದ ಮೇಲೆ ಕುಳಿತುಕೊಳ್ಳಬೇಕಾಗಿ ಬಂದರೆ, ಗ್ರಾಹಕರು ನೆಲದ ಮೇಲೆಯೇ ಕುಳಿತುಕೊಳ್ಳುತ್ತಾರೆ. ಆ ಮಟ್ಟಗೆ ನಮ್ಮ ಮಳಿಗೆ ಕಿಕ್ಕಿರಿದಿರುತ್ತಿತ್ತು. ಆದರೀಗ ಎಲ್ಲವೂ ಖಾಲಿ ಖಾಲಿ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
“ಆ ಸ್ಫೋಟ ಎಲ್ಲವನ್ನೂ ನುಚ್ಚುನೂರಾಗಿಸಿದೆ. ಗಾಜುಗಳನ್ನು ನಾವು ಬದಲಿಸಬಹುದು. ಆದರೆ, ಗ್ರಾಹಕರು? ನಾವು ಅದನ್ನೇ ಕಳೆದುಕೊಂಡಿರುವುದು” ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
“ಇವೆಲ್ಲ ಆನ್ ಲೈನ್ ಆರ್ಡರ್ ಗಳು. ಎರಡು ವಾರಗಳ ಹಿಂದೆ ಗ್ರಾಹಕರು ಇವಕ್ಕಾಗಿ ಆರ್ಡರ್ ನೀಡಿದ್ದಾರೆ. ಅವರು ಈ ಬಟ್ಟೆಗಳನ್ನು ವಿಡಿಯೊ ಕರೆ ಮೂಲಕ ಆಯ್ಕೆ ಮಾಡಿದ್ದರು ಹಾಗೂ ಮುಂಗಡವನ್ನೂ ಪಾವತಿಸಿದ್ದರು. ಇದೀಗ ಅವರು ತಮ್ಮ ಆರ್ಡರ್ ಗಳನ್ನು ರದ್ದು ಮಾಡುತ್ತಿದ್ದು, ಅದರ ಬದಲು ಗುರುಗ್ರಾಮ ಅಥವಾ ನೊಯ್ಡಾಗೆ ಕಳಿಸುವಂತೆ ಕೇಳುತ್ತಿದ್ದಾರೆ. ಅವರು “ಅಣ್ಣಾ, ಸುರಕ್ಷಿತವಾಗಿದೆಯೇ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ನಾವು “ಹೌದು, ಬನ್ನಿ” ಎಂದು ಉತ್ತರಿಸುತ್ತೇವೆ. ಆದರೆ, ಅವರು ಬರುವುದೇ ಇಲ್ಲ” ಎಂದು ಅವರು ವಿಷಾದಿಸುತ್ತಾರೆ.
ಚಾಂದಿನಿ ಚೌಕ್ ಗೆ ಹೊಂದಿಕೊಂಡಂತಿರುವ ಆಭರಣ ಮತ್ತು ವಿವಾಹ ಸಲಕರಣೆಗಳಿಗೆ ಹೆಸರಾದ ಲಜಪತ್ ರಾಯ್ ಮಾರ್ಕೆಟ್ ನಲ್ಲಿನ ವಾತಾವರಣವೂ ನೀರವವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಹಾಗೂ ಅಖಿಲ ಭಾರತ ವರ್ತಕರ ಮಹಾ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಖಂಡೇವಾಲ್, “ಐದು ದಿನಗಳ ಪೊಲೀಸರ ಸರ್ಪಗಾವಲು ಹಾಗೂ ಇನ್ನೂ ಉಳಿದಿರುವ ಭೀತಿಯಿಂದಾಗಿ ಚಾಂದಿನಿ ಚೌಕ್ ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ 300 ಕೋಟಿ ರೂ.ನಿಂದ 400 ಕೋಟಿ ರೂ.ವರೆಗೆ ನೇರ ನಷ್ಟವಾಗಿದೆ” ಎಂದು ಹೇಳುತ್ತಾರೆ.
ನವೆಂಬರ್ 10ರಂದು ನಡೆದ ಕಾರು ಬಾಂಬ್ ಸ್ಫೋಟದ ಕಾರಣಕ್ಕೆ ಪೊಲೀಸರು ಚಾಂದಿನಿ ಚೌಕ್ ಮೆಟ್ರೊ ನಿಲ್ದಾಣದಿಂದ ಕೆಂಪು ಕೋಟೆಯವರೆಗಿನ ಬೀದಿಯನ್ನು ತಮ್ಮ ವಶಕ್ಕೆ ಪಡೆಯಬೇಕಾಗಿ ಬಂದಿತ್ತು. ಈ ಸಂಪೂರ್ಣ ಐದು ದಿನಗಳ ಕಾಲ ಇಡೀ ಪ್ರದೇಶಕ್ಕೆ ಸರ್ಪಗಾವಲು ಹಾಕಲಾಗಿತ್ತು. ಈ ಬೀದಿಗಳಲ್ಲಿ ಕೇವಲ ಸ್ಥಳೀಯ ನಿವಾಸಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು.
ಮಳಿಗೆಗಳು ತೆರೆದಿದ್ದರೂ, ಅವು ಗ್ರಾಹಕರಿಗೆ ಮಾತ್ರ ಪ್ರವೇಶಿಸಲಉ ಅಸಾಧ್ಯದವಾಗಿತ್ತು. ಸ್ಫೋಟ ಸಂಭವಿಸಿದ ಆರನೆಯ ದಿನದ ಬಳಿಕ ಮಾತ್ರ ತಡೆಗೋಡೆಗಳನ್ನು ಭಾಗಶಃ ತೆರವುಗೊಳಿಸಲಾಗಿತ್ತು ಹಾಗೂ ಸಾರ್ವಜನಿಕರಿಗೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ತೆರೆಯಲಾಗಿತ್ತು. ಇದರಿಂದ ಚಾಂದಿನಿ ಚೌಕ್ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶದಲ್ಲಿರುವ ಅಂಗಡಿ-ಮುಂಗಟ್ಟುಗಳು ಭಾರಿ ನಷ್ಟಕ್ಕೀಡಾಗಿವೆ.







