ಪ್ರತಿಪಕ್ಷಗಳಿಂದ ಎಸ್ಐಆರ್ ವಿರುದ್ಧ ಅಪಪ್ರಚಾರ: ಬಿಜೆಪಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.24: ಬಿಹಾರದಲ್ಲಿ ನಡೆಯುತ್ತಿರುವ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಏಆರ್) ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆಯೆಂದು ಬಿಜೆಪಿ ರವಿವಾರ ಆಪಾದಿಸಿದೆ.
ಮತದಾರಪಟ್ಟಿಯಿಂದ ಹೊರಗಿಡಲಾದ ಮತದಾರರು ಇತರ ದಾಖಲೆಗಳ ಜೊತೆ ಆಧಾರ್ ಅನ್ನು ಸಲ್ಲಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆಯೇ ಹೊರತು, ಮತದಾನದ ಹಕ್ಕುಗಳನ್ನು ಪಡೆಯಲು ಆಧಾರ್ ಮಾತ್ರವೇ ಏಕಮಾತ್ರ ಸಿಂಧುತ್ವವಿರುವ ದಾಖಲೆಯಾಗಲಾರದು ಎಂದವರು ಹೇಳಿದರು.
ಆಧಾರ್ ಕೇವಲ ವ್ಯಕ್ತಿಯ ಗುರುತು ಹಾಗೂ ವಾಸ್ತವ್ಯದ ಪುರಾವೆಯ ದಾಖಲೆಯಾಗಿದೆ. ಆದರೆ ಅದು ಪೌರತ್ವವನ್ನು ದೃಢಪಡಿಸಲಾರದೆಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ವರಿಷ್ಠ ಅಮಿತ್ ಮಾಳವೀಯ ತಿಳಿಸಿದ್ದಾರೆ.
ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಅದನ್ನು ಪೌರತ್ವ ದೃಢಪಡಿಸುವ ದಾಖಲೆಪತ್ರವಾಗಿ ಪರಿಗಣಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ ಎಂದರು.
ಒಂದು ವೇಳೆ ಓರ್ವ ವ್ಯಕ್ತಿಯು ಭಾರತದ ಪೌರನಾಗಿರದಿದ್ದಲ್ಲಿ ಮತದಾರಪಟ್ಟಿ ನೋಂದಣಿಯಿಂದ ಆತನನ್ನು ಅನರ್ಹಗೊಳಿಸಬೇಕು ಎಂದು ಜನತಾ ಪ್ರಾತಿನಿಧ್ಯ ಕಾಯ್ದೆಯು ಹೇಳುತ್ತದೆ.
‘‘ಇಲ್ಲಿರುವ ಸತ್ಯವು ತುಂಬಾ ಸರಳವಾಗಿದೆ. ಎಸ್ಐಆರ್ ಅಬಾಧಿತವಾಗಿದೆ. ಆಧಾರ್ ಒಂದರಿಂದಲೇ ಯಾರನ್ನೂ ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಲು ಸಾಧ್ಯವಿಲ್ಲ. ಮೃತಪಟ್ಟವರು, ನಕಲಿ ಮತದಾರರು ಹಾಗೂ ರೋಹಿಂಗ್ಯಾಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು ಮತ್ತು ಭಾರತೀಯ ಪೌರರು ಮುಂದಿನ ಸರಕಾರವನ್ನು ಚುನಾಯಿಸಲಿದ್ದಾರೆಯೇ ಹೊರತು ವಿದೇಶಿಯರಲ್ಲವೆಂದು ಮಾಳವೀಯ ತಿಳಿಸಿದರು.
ಮತದಾರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದಕ್ಕೆ ಸಂಬಂಧಿಸಿ ಈವರೆಗೆ 84,305 ಆಕ್ಷೇಪಣೆಗಳು ಮಾತ್ರವೇ ಸಲ್ಲಿಕೆಯಾಗಿದ್ದು, ಇವು ಒಟ್ಟು ಕೈಬಿಡಲಾದ ಹೆಸರುಗಳ ಕೇವಲ 1.3 ಶೇಕಡದಷ್ಟಾಗಿದೆ ಎಂದು ಮಾಳವೀಯ ತಿಳಿಸಿದರು.







