ಅಂಗವಿಕಲ ವ್ಯಕ್ತಿಗಳು ಕೌಶಲ ಅಭಿವೃದ್ಧಿ ಯೋಜನೆಯಡಿ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಅಂಗವಿಕಲ ವ್ಯಕ್ತಿಗಳ ಕೌಶಲ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸುವುದು ಅಥವಾ ಪುರಾವೆಯನ್ನು ಸಲ್ಲಿಸುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ.
ಇದೇ ಸಂದರ್ಭ, ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ದೃಢೀಕರಣ ವಿಫಲತೆ ಕಾರಣಕ್ಕೆ ಯಾವುದೇ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ತಿಳಿಸಿದೆ.
ಪ್ರಯಾಣ ಭತ್ಯೆ, ಊಟ ಹಾಗೂ ವಸತಿ, ಸಾರಿಗೆ ಹಾಗೂ ಉದ್ಯೋಗ ನಂತರ ನೀಡುವ ಬೆಂಬಲ ಸೇರಿದಂತೆ ಈ ಯೋಜನೆ ಅಡಿಯಲ್ಲಿ ನಗದು ಸೌಲಭ್ಯಗಳನ್ನು ಪಡೆಯಲು ಆಧಾರ್ ದೃಢೀಕರಣ ಅಗತ್ಯವಾಗಿದೆ ಎಂದು ಸಚಿವಾಲಯ ಗಝೆಟ್ ಅಧಿಸೂಚನೆಯಲ್ಲಿ ತಿಳಿಸಿದೆ.
ಅಂಗವಿಕಲ ವ್ಯಕ್ತಿಗಳ ಕೌಶಲ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ಎಪಿ-ಎಸ್ಡಿಪಿ) ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಡಿಡಬ್ಲ್ಯುಡಿ) 2015 ಮಾರ್ಚ್ನಲ್ಲಿ ಆರಂಭಿಸಿದ ಕೇಂದ್ರ ಸರಕಾರದ ಯೋಜನೆ.
ಅಂಗವಿಕಲ ವ್ಯಕ್ತಿಗಳ (ಜಿಡಬ್ಲ್ಯುಡಿಗಳ) ಕೌಶಲಗಳನ್ನು ಹೆಚ್ಚಿಸುವ ಉತ್ತಮ ಗುಣಮಟ್ಟದ ವೃತ್ತಿಪರ ತರಬೇತಿಯನ್ನು ನೀಡುವ ಗುರಿಯನ್ನು ಇದು ಹೊಂದಿದೆ. ಇದು ಅವರಿಗೆ ಅರ್ಥಪೂರ್ಣವಾದ ಉದ್ಯೋಗವನ್ನು ಪಡೆಯಲು ಹಾಗೂ ಸ್ವಾವಲಂಬಿಗಳಾಗಲು ಅನುವು ಮಾಡಿಕೊಡುತ್ತದೆ.
ಒಂದು ವೇಳೆ ಅರ್ಹ ವ್ಯಕ್ತಿ ಆಧಾರ್ ಸಂಖ್ಯೆ ಹೊಂದಿರದೇ ಇದ್ದರೆ, ಅವರು ಆಧಾರ್ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಕ್ಕಳು ಈ ಅರ್ಜಿಯನ್ನು ಪೋಷಕರು ಅಥವಾ ಕಾನೂನು ಬದ್ಧ ಪೋಷಕರ ಒಪ್ಪಿಗೆಯೊಂದಿಗೆ ಸಲ್ಲಿಸಬಹುದು.
ಆಧಾರ್ ಸಿಗುವ ವರೆಗೆ ಫಲಾನುಭವಿಗಳು ಜನನ ಪ್ರಮಾಣ ಪತ್ರ, ಶಾಲಾ ದಾಖಲೆಗಳು ಅಥವಾ ಕಾನೂನು ಬದ್ಧ ದತ್ತು ಅಥವಾ ಪೋಷಕತ್ವದ ದಾಖಲೆಗಳು ಸೇರಿದಂತೆ ನಿರ್ದಿಷ್ಟ ಪರ್ಯಾಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಗುರುತನ್ನು ತಿಳಿಸಬಹುದು.
ಅಂಗವಿಕಲ ವ್ಯಕ್ತಿಗಳ ನೋಂದಣಿ ಹಾಗೂ ನವೀಕರಣವನ್ನು ಸುಗುಮಗೊಳಿಸಲು ಅವರ ಸಮೀಪದ ಸ್ಥಳಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲು ಅಥವಾ ಸ್ವತಃ ನೋಂದಣಿದಾರರಾಗಲು ಸಚಿವಾಲಯ ತನ್ನ ಜಾರಿ ಏಜೆನ್ಸಿಗಳಿಗೆ ಸೂಚನೆ ನೀಡಿದೆ.







