ಆಧಾರ್ ಯೋಜನೆಗೆ 11,385 ಕೋಟಿ ರೂ. ದುಂದುವೆಚ್ಚ ಮಾಡಲಾಗಿದೆ: ಸಬೀರ್ ಭಾಟಿಯಾ
ಆಧಾರ್ ಯೋಜನೆಯನ್ನು ಕೇವಲ 136 ಕೋಟಿ ರೂ.ಗಳಲ್ಲಿ ಜಾರಿಗೊಳಿಸಬಹುದಿತ್ತು ಎಂದ ಹಾಟ್ ಮೇಲ್ ಸಹ ಸಂಸ್ಥಾಪಕ

ಸಬೀರ್ ಭಾಟಿಯಾ | PTI
ಹೊಸದಿಲ್ಲಿ: ಆಧಾರ್ ಯೋಜನೆಗೆ ಒಟ್ಟು 11,385 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅದರ ಬದಲಿಗೆ ಕೇವಲ 175.16 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಬಹುದಿತ್ತು ಎಂದು ಹಾಟ್ ಮೇಲ್ ಸಹ ಸಂಸ್ಥಾಪಕ ಸಬೀರ್ ಭಾಟಿಯಾ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಖರ್ ಗುಪ್ತ ನಡೆಸಿಕೊಡುವ ‘ಪ್ರಖರ್ ಕೆ ಪ್ರವಚನ್’ ಟಾಕ್ ಶೋನಲ್ಲಿ ಸಬೀರ್ ಭಾಟಿಯಾ ಆಧಾರ್ ಯೋಜನೆ ಕುರಿತು ಮಾತನಾಡಿದ್ದಾರೆ.
ಆಧಾರ್ ಯೋಜನೆಗೆ 1.3 ಶತಕೋಟಿ ಡಾಲರ್ ಅನ್ನು ದುಂದುವೆಚ್ಚ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ತೆಗೆದುಕೊಳ್ಳಲಾಗಿರುವ ಎಲ್ಲರ ಬಯೋಮೆಟ್ರಿಕ್ ವಿವರಗಳನ್ನು ಬಳಸಿಕೊಳ್ಳಲಾಗಿದೆಯೆ ಎಂದೂ ಪ್ರಶ್ನಿಸಿದ್ದಾರೆ.
ಭಾರತದ ಎಲ್ಲ ನಿವಾಸಿಗಳಿಗೆ ಆಧಾರ್ ಎಂದು ಕರೆಯಲಾಗುವ ವಿಶಿಷ್ಟ ಗುರುತಿನ ಸಂಖ್ಯೆ (UID) ನೀಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿತ್ತು.
ಆಧಾರ್ ಯೋಜನೆಗೆ ಮಾಡಿರುವ ವೆಚ್ಚದಲ್ಲಿನ ಅಲ್ಪ ಭಾಗದಲ್ಲಿ ಆಗ ಹೇಗೆ ಅದನ್ನು ಜಾರಿಗೊಳಿಸಬಹುದಿತ್ತು ಎಂಬ ಬಗ್ಗೆ ತಮ್ಮ ಯೋಜನೆಗಳನ್ನು ಉದ್ಯಮಿಯೂ ಆದ ಸಬೀರ್ ಭಾಟಿಯಾ ಹಂಚಿಕೊಂಡಿದ್ದಾರೆ.
“ವ್ಯಕ್ತಿಯೊಬ್ಬರ ವಿಶಿಷ್ಟ ಗುರುತನ್ನು ಬಗೆಹರಿಸುವ ಉತ್ತಮ ಮಾರ್ಗವೆಂದರೆ, ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರ ಬಳಿಯೂ ಇರುವ ವಿಡಿಯೊ ಹಾಗೂ ಧ್ವನಿ ತಂತ್ರಜ್ಞಾನ” ಎಂದೂ ಅವರು ಹೇಳಿದ್ದಾರೆ.
ಈ ಮಾತಿಗೆ ಪೂರಕವಾಗಿ ವಿಮಾನ ನಿಲ್ದಾಣಗಳ ಉದಾಹರಣೆ ನೀಡಿರುವ ಸಬೀರ್ ಭಾಟಿಯಾ, “ನೀವು ವಿಮಾನ ನಿಲ್ದಾಣದ ಒಳ ಹೊಕ್ಕ ಕೂಡಲೇ ನೀವು ಯಾವುದೇ ಗುರುತಿನ ಚೀಟಿಯನ್ನು ತೋರಿಸಬೇಕಾದ ಅಗತ್ಯವಿಲ್ಲ. ಅಲ್ಲಿನ ವ್ಯವಸ್ಥೆಯೇ ನಿಮ್ಮನ್ನು ಗುರುತಿಸಿ, ನಿಮ್ಮನ್ನು ಪರಿಶೀಲಿಸಲಾಗಿದೆ ಎಂದು ಹೇಳುತ್ತದೆ” ಎಂದು ಹೇಳಿದ್ದಾರೆ. “ಇದು ತಂತ್ರಜ್ಞಾನವಾಗಿದ್ದು, ಇದನ್ನು ಕಡಿಮೆ ವೆಚ್ಚದಲ್ಲಿ ರೂಪಿಸಬಹುದಾಗಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಆಧಾರ್ ಯೋಜನೆಯನ್ನು ಕೇವಲ 20 ದಶಲಕ್ಷ ಡಾಲರ್ ನಲ್ಲಿ ಜಾರಿಗೊಳಿಸಬಹುದಿತ್ತು ಎಂದು ಅವರು ತಿಳಿಸಿದ್ದಾರೆ.
ಆಧಾರ್ ಯೋಜನೆಯನ್ನು ಯಾರು ಜಾರಿಗೊಳಿಸಿದ್ದಾರೆ ಅವರು ತಂತ್ರಜ್ಞರಲ್ಲ ಹಾಗೂ ಅವರಿಗೆ ತಂತ್ರಜ್ಞಾನದ ಕುರಿತು ತಿಳಿದಿಲ್ಲ ಎಂದೂ ಅವರು ಪಾಡ್ ಕಾಸ್ಟ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
“ಅವರನ್ನು ಜೀವನದಲ್ಲಿ ಎಂದೂ ಕ್ರಮಬದ್ಧಗೊಳಿಸಲಾಗಿಲ್ಲ. ಹೀಗಾಗಿಯೇ ಈ ಸಮಸ್ಯೆ ಉಂಟಾಗಿದೆ. ನಾನು ನನ್ನ ಕೈನಿಂದಲೇ ಉತ್ಪನ್ನವೊಂದನ್ನು ನಿರ್ಮಿಸಿದ್ದೇನೆ ಹಾಗೂ ಯಾವ ಉದ್ದೇಶಕ್ಕೆ ಯಾವ ತಂತ್ರಜ್ಞಾನ ಬಳಸಬೇಕು ಎಂಬುದು ನನಗೆ ತಿಳಿದಿದೆ. ನನಗೆ ಆವಿಷ್ಕಾರವೆಂದರೆ ಏನೆಂದು ತಿಳಿದಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮೆಲ್ಲರ ಧ್ವನಿಗಳು ವಿಶಿಷ್ಟವಾಗಿರುವುದರಿಂದ, ಪ್ರತಿ ಭಾರತೀಯರ ಧ್ವನಿ ಮುದ್ರಣ ತೆಗೆದುಕೊಳ್ಳು ವುದು ಆವಿಷ್ಕಾರವಾಗಿದೆ” ಎಂದು ಅವರು ತಿಳಿಸಿದ್ದಾರೆ.







