ಅಂತಿಮ ಗಂಟೆಯ ಮತದಾನದ ವೀಡಿಯೋ ಚಿತ್ರೀಕರಣ ಮಾಡಿ; ಆಪ್, ಕಾಂಗ್ರೆಸ್ ಗೆ ಆದಿತ್ಯ ಠಾಕ್ರೆ ಸಲಹೆ

ಆದಿತ್ಯ ಠಾಕ್ರೆ | PC : PTI
ಮುಂಬೈ: ಚುನಾವಣಾ ಆಯೋಗವು ಭ್ರಷ್ಟವಾಗಿದೆ ಎಂದು ಮಂಗಳವಾರ ಆರೋಪಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ, ಮತದಾನದ ವೇಳೆ ಎಚ್ಚರಿಕೆಯಿಂದಿರುವಂತೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಕರೆ ನೀಡಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣೆಯ ಒಂದು ದಿನ ಮೊದಲು ಅವರು ಈ ಎಚ್ಚರಿಕೆ ನೀಡಿದ್ದಾರೆ. ಆಪ್ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಜೊತೆಗೆ ‘ಇಂಡಿಯಾ’ ಮೈತ್ರಿಕೂಟದ ಘಟಕ ಪಕ್ಷಗಳಾಗಿವೆ.
ಪ್ರತಿಪಕ್ಷ ನಾಯಕರು ಮತ್ತು ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಪ್ರಕ್ರಿಯೆಯ ಮೇಲೆ ನಿಕಟ ನಿಗಾ ಇಡಬೇಕು ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅವರು ಹೇಳಿದ್ದಾರೆ.
ಸಂಭಾವ್ಯ ಮತ ವಂಚನೆ ಮತ್ತು ನಕಲಿ ಮತದಾನ ಚಟುವಟಿಕೆಗಳ ಬಗ್ಗೆ ಹತ್ತಿರದಿಂದ ನಿಗಾ ಇಡುವಂತೆ ಮಹಾರಾಷ್ಟ್ರದ ಮಾಜಿ ಸಚಿವರು ಆಪ್, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳನ್ನು ಒತ್ತಾಯಿಸಿದ್ದಾರೆ. ಬಿಜೆಪಿಗೆ ಲಾಭವಾಗುವ ಚಟುವಟಿಕೆಗಳಿಗೆ ಚುನಾವಣಾ ಆಯೋಗವು ಅವಕಾಶ ಮಾಡಿಕೊಡುತ್ತದೆ ಎಂದು ಅವರು ಆರೋಪಿಸಿದರು.
ಅಂತಿಮ ಗಂಟೆಯ ಮತದಾನದ ವೀಡಿಯೊ ತೆಗೆಯುವ ಬಗ್ಗೆ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಪರಿಶೀಲನೆ ನಡೆಸಬೇಕು, ಯಾಕೆಂದರೆ, ಈ ಅವಧಿಯಲ್ಲಿ ಮತದಾನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ ಎಂದು ಚುನಾವಣಾ ಆಯೋಗ ಹೇಳುತ್ತದೆ ಎಂದು ಆದಿತ್ಯ ಠಾಕ್ರೆ ಹೇಳಿದರು.
ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಮತದಾನ ಪ್ರಮಾಣದ ಹೆಚ್ಚಳವನ್ನು ದುರ್ಬಳಕೆ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.