ರಾಜಸ್ಥಾನದಲ್ಲಿ ನಡೆದ ವೈಮಾನಿಕ ದಾಳಿಯ ವೀಡಿಯೊ ಎಂದು 4 ವರ್ಷ ಹಳೆಯ ವೀಡಿಯೊ ಪ್ರಸಾರ ಮಾಡಿದ Aaj Tak, NDTV ಸಹಿತ ಹಲವು ಮಾಧ್ಯಮಗಳು!

Photo credit: Alt News
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ವೇಳೆ ಮೇ 9ರಂದು ಭಾರತೀಯ ಮಾಧ್ಯಮಗಳು ʼರಾಜಸ್ಥಾನದ ಜೈಸಲ್ಮೇರ್ ನಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸುತ್ತಿರುವ ದೃಶ್ಯʼ ಎಂದು ಹೇಳಿಕೊಂಡು ಕೆಲ ವೀಡಿಯೊವನ್ನು ಪ್ರಸಾರ ಮಾಡಿತ್ತು. ಆದರೆ, ಈ ವೀಡಿಯೊ ಮತ್ತು ಭಾರತ- ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ಸಂಬಂಧವೇ ಇಲ್ಲ ಎನ್ನುವುದು alt news ನಡೆಸಿದ ಸತ್ಯ ಪರಿಶೀಲನೆಯ ವೇಳೆ ಬಯಲಾಗಿದೆ.
ʼಇಂಡಿಯಾ ಟುಡೇʼ ಗ್ರೂಪ್ನ ಹಿಂದಿ ಚಾನೆಲ್ ʼಆಜ್ ತಕ್ʼನಲ್ಲಿ ನಿರೂಪಕಿ ಅಂಜನಾ ಓಂ ಕಶ್ಯಪ್ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಈ ವೀಡಿಯೊವನ್ನು ಪ್ರಸಾರ ಮಾಡಲಾಯಿತು. 'ಸ್ವಲ್ಪ ಸಮಯದ ಹಿಂದೆ' ಭಾರತದ ಜೈಸಲ್ಮೇರ್ನಲ್ಲಿ ಪಾಕಿಸ್ತಾನದ ವಾಯುದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ ವೀಡಿಯೊ ಎಂದು ಅವರು ಹೇಳಿಕೊಂಡಿದ್ದರು.
ಇದೇ ವಿಡಿಯೋವನ್ನು ಆಜ್ ತಕ್ ವಾಹಿನಿಯಲ್ಲಿ ನಿರೂಪಕಿ ಶ್ವೇತಾ ಸಿಂಗ್ ನಡೆಸಿಕೊಟ್ಟ ಬುಲೆಟಿನ್ನಲ್ಲಿಯೂ ಪ್ರಸಾರ ಮಾಡಲಾಯಿತು. ಜೈಸಲ್ಮೇರ್ನಲ್ಲಿ ಪಾಕಿಸ್ತಾನದ ವಾಯುದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತು ಎಂದು ವೀಡಿಯೊಗೆ ವಿವರಣೆ ನೀಡಲಾಗಿತ್ತು.
ಎನ್ಡಿಟಿವಿ ಕೂಡ ಈ ವಿಡಿಯೋವನ್ನು ಪ್ರಸಾರ ಮಾಡಿತ್ತು. ಭಾರತ ಜೈಸಲ್ಮೇರ್ನಲ್ಲಿ ಪಾಕಿಸ್ತಾನದ ವಾಯುದಾಳಿಗಳನ್ನು ವಿಫಲಗೊಳಿಸುತ್ತಿರುವ ದೃಶ್ಯಾವಳಿಯಾಗಿದೆ ಎಂದು ಹೇಳಿಕೊಂಡಿತ್ತು.
ಇಂಡಿಯಾ ಟಿವಿ ಸುದ್ದಿ ವಾಹಿನಿ ಕೂಡ ಈ ವೀಡಿಯೊವನ್ನು ಜೈಸಲ್ಮೇರ್ಗೆ ಸೇರಿದೆ ಎಂದು ಹೇಳಿಕೊಂಡು ಪ್ರಸಾರ ಮಾಡಿದೆ. ಇದಲ್ಲದೆ ಟೈಮ್ಸ್ ನೌ, ಟೈಮ್ಸ್ ನೌ ನವಭಾರತ್, ಎಬಿಪಿ ನ್ಯೂಸ್, ನ್ಯೂಸ್ 18, ಒನ್ ಇಂಡಿಯಾ, ನ್ಯೂಸ್ ನೇಷನ್ ಮತ್ತು ಇಂಡಿಯಾ ಟಿವಿ ಇದೇ ರೀತಿ ವೀಡಿಯೊವನ್ನು ಪ್ರಸಾರ ಮಾಡಿದೆ.
ವಾಸ್ತವವೇನು?
ಜೈಸಲ್ಮೇರ್ನಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸುತ್ತಿರುವ ದೃಶ್ಯ ಎಂದು ಹೇಳಿಕೊಂಡು ಭಾರತೀಯ ಮಾಧ್ಯಮಗಳು ಪ್ರಸಾರ ಮಾಡಿದ ವೀಡಿಯೊವನ್ನು ಆಲ್ಟ್ ನ್ಯೂಸ್ ಪರಿಶೀಲನೆ ನಡೆಸಿದೆ. ಈ ವೇಳೆ ವೀಡಿಯೊವನ್ನು 2021ರ ಮೇ 11ರಂದು NSFchannel ಎಂಬ YouTube ಚಾನೆಲ್ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ವೀಡಿಯೊ ಶೀರ್ಷಿಕೆಯಲ್ಲಿ ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯಾದ ಐರನ್ ಡೋಮ್ ಕಾರ್ಯರೂಪದಲ್ಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವಯಂ ಪರಿಶೀಲನೆ ನಡೆಸಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿದೆ. ಆದರೆ, ವೀಡಿಯೊ ಕನಿಷ್ಠ ನಾಲ್ಕು ವರ್ಷ ಹಳೆಯದು. ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ಸಂಘರ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಲವಾರು ಸುದ್ದಿ ವಾಹಿನಿಗಳು ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ವರದಿ ಮಾಡುವಾಗ ನಾಲ್ಕು ವರ್ಷಗಳ ಹಳೆಯ ವೀಡಿಯೊವನ್ನು ಪ್ರಸಾರ ಮಾಡಿ ಆ ವೀಡಿಯೊ ಭಾರತದ ಜೈಸಲ್ಮೇರ್ದ್ದು ಎಂದು ತಪ್ಪಾಗಿ ಹೇಳಿಕೊಂಡಿರುವುದು ಕಂಡು ಬಂದಿದೆ.







