ದಂಗಲ್ ಚಿತ್ರದ ಗಳಿಕೆ 2000 ಕೋಟಿ; ಆದರೆ ನಮಗೆ ಸಿಕ್ಕಿದ್ದು ಕೇವಲ ಒಂದು ಕೋಟಿ- ಬಬಿತಾ ಫೋಗಟ್

ಬಬಿತಾ ಫೋಗಟ್ | PC: PTI
ಹೊಸದಿಲ್ಲಿ: ಬ್ಲಾಕ್ಬಸ್ಟರ್ "ದಂಗಲ್" ಚಿತ್ರದಿಂದ ತಮ್ಮ ಕುಟುಂಬಕ್ಕೆ ದಕ್ಕಿದ್ದು ಕೇವಲ ಒಂದು ಕೋಟಿ ರೂಪಾಯಿ ಮಾತ್ರ ಎಂಬ ಅಂಶವನ್ನು ಕುಸ್ತಿಪಟು ಬಬತಾ ಫೋಗಟ್ ಬಹಿರಂಗಪಡಿಸಿದ್ದಾರೆ. ಫೋಗಟ್ ಕುಟುಂಬದ ನೈಜ ಕಥೆಯನ್ನು ಆಧರಿಸಿದ ಈ ಚಿತ್ರ ವಿಶ್ವಾದ್ಯಂತ ಒಟ್ಟು 2000 ಕೋಟಿ ರೂಪಾಯಿ ಗಳಿಸಿದೆ. ಆದರೆ ತಮ್ಮ ಕುಟುಂಬ ಪರಿಹಾರದ ರೂಪದಲ್ಲಿ ಕೇವಲ ಒಂದು ಕೋಟಿ ರೂಪಾಯಿ ಪಡೆದಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 24ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಹೇಳಿಕೆ ಮೂಲಕ ಬಬಿತಾ, ನಿರೂಪಕರು ನಿಬ್ಬೆರಗಾಗುವಂತೆ ಮಾಡಿದರು. ನಿರೂಪಕರು ಇದನ್ನು ಮತ್ತೆ ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ, "ಒಟ್ಟು 2000 ಕೋಟಿ ರೂಪಾಯಿಯನ್ನು ದಂಗಲ್ ಚಿತ್ರ ಗಳಿಸಿದ್ದರೂ, ಫೋಗಟ್ ಕುಟುಂಬ ಕೇವಲ ಒಂದು ಕೋಟಿ ರೂಪಾಯಿ ಮಾತ್ರ ಪಡೆದಿದೆಯೇ?" ಎಂದು ಕೇಳಿದರು. ಆಗ ಬಬಿತಾ ಹೌದು ಎಂದು ಸ್ಪಷ್ಟಪಡಿಸಿದರು.
ಇದರಿಂದ ನಿಮಗೆ ಭ್ರಮನಿರಸನವಾಗಿದೆಯೇ ಎಂದು ನಿರೂಪಕರು ಕೇಳಿದಾಗ, ಪ್ರತಿಕ್ರಿಯಿಸಿದ ಬಬಿತಾ, ಇದು ತಮ್ಮ ತಂದೆ ಮಹಾವೀರ್ ಫೋಗಟ್ ಅವರಲ್ಲಿ ಅಡಗಿರುವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. "ನಮ್ಮ ತಂದೆ ಹೇಳಿರುವುದು ಒಂದೇ ವಿಷಯ- ನಮಗೆ ಜನರ ಪ್ರೀತಿ ಹಾಗೂ ಗೌರವ ಬೇಕು" ಎಂದು ಬಬಿತಾ ವಿವರಿಸಿದರು.
2016ರ ಡಿಸೆಂಬರ್ 23ರಂದು ಬಿಡುಗಡೆಯಾದ ದಂಗಲ್ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದು, ಅಮೀರ್ ಖಾನ್, ಮಹಾವೀರ್ ಫೋಗಟ್ ಅವರ ಪ್ರಮುಖ ಪಾತ್ರ ನಿರ್ವಹಿಸಿರುವುದು ಮಾತ್ರವಲ್ಲದೇ ಈ ಚಿತ್ರದ ಸಹ ನಿರ್ಮಾಪಕರೂ ಹೌದು. ಇದು ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರು ತಮ್ಮ ಮಕ್ಕಳಾದ ಗೀತಾ ಹಾಗೂ ಬಬಿತಾ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ಬೆಳೆಸಿದ ಕಥಾನಕವನ್ನು ಬಿಂಬಿಸುತ್ತದೆ.







