ಧರ್ಮಗ್ರಂಥಗಳ ವಿರುದ್ಧ ಅಪಚಾರವನ್ನು ಅಪರಾಧವನ್ನಾಗಿ ಪರಿಗಣಿಸುವ ಮಸೂದೆ ಮಂಡಿಸಿದ ಆಪ್ ಸಂಸದ

ರಾಘವ ಛಡ್ಡಾ | Photo Credit : PTI
ಹೊಸದಿಲ್ಲಿ,ಡಿ.6: ಆಪ್ ಸಂಸದ ರಾಘವ ಛಡ್ಡಾ ಅವರು ಗುರು ಗ್ರಂಥ ಸಾಹಿಬ್, ಭಗವದ್ಗೀತೆ, ಕುರ್ ಆನ್ ಮತ್ತು ಬೈಬಲ್ ನಂತಹ ಧಾರ್ಮಿಕ ಗ್ರಂಥಗಳ ವಿರುದ್ಧ ಅಪಚಾರವನ್ನೆಸಗುವ ಕೃತ್ಯಗಳಿಗೆ ಗರಿಷ್ಠ ಶಿಕ್ಷೆಯನ್ನು ಕೋರಿ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದಾರೆ.
ತನ್ನ ಮಸೂದೆಯು ಧಾರ್ಮಿಕ ಗ್ರಂಥಗಳ ವಿರುದ್ಧ ಅಪಚಾರವನ್ನು ಗರಿಷ್ಠ ಶಿಕ್ಷೆಯ ಅಪರಾಧವನ್ನಾಗಿಸಲು ಭಾರತೀಯ ನ್ಯಾಯ ಸಂಹಿತಾಕ್ಕೆ ತಿದ್ದುಪಡಿಯನ್ನು ಪ್ರಸ್ತಾವಿಸಿದೆ ಎಂದು ಛಡ್ಡಾ ಹೇಳಿದರು.
ಪಂಜಾಬ್ ಹಲವಾರು ಧರ್ಮನಿಂದನೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಇಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲು ರಾಜ್ಯ ವಿಧಾನಸಭೆಯು 2018ರಲ್ಲಿ ಇಂತಹುದೇ ಮಸೂದೆಯನ್ನು ಅಂಗೀಕರಿಸಿತ್ತು ಎಂದರು.
ಆ ಮಸೂದೆಯನ್ನು ರಾಷ್ಟ್ರಪತಿಗಳು ಮರಳಿಸಿದ್ದರು,ನಂತರ ಪಂಜಾಬ್ ವಿಧಾನಸಭೆಯು ಧರ್ಮನಿಂದನೆ ಪ್ರಕರಣಗಳಲ್ಲಿ 10 ವರ್ಷಗಳಿಂದ ಹಿಡಿದು ಜೀವಾವಧಿಯವರೆಗೆ ಗರಿಷ್ಠ ಶಿಕ್ಷೆಯನ್ನು ವಿಧಿಸಲು ಮತ್ತೆ ಹೊಸ ಮಸೂದೆಯನ್ನು ಮಂಡಿಸಿತ್ತು ಎಂದು ಛಡ್ಡಾ ತಿಳಿಸಿದರು.
ಜುಲೈನಲ್ಲಿ ಪಂಜಾಬಿನ ಆಪ್ ಸರಕಾರವು 2025ರ ಪಂಜಾಬ್ ಪವಿತ್ರ ಗ್ರಂಥಗಳ ವಿರುದ್ಧ ಅಪರಾಧಗಳ ತಡೆ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿತ್ತು.
ಧಾರ್ಮಿಕ ಗ್ರಂಥಗಳ ವಿರುದ್ಧ ಅಪಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಮತ್ತು ಗರಿಷ್ಠ 10 ಲಕ್ಷ ರೂ.ಗಳ ದಂಡವನ್ನು ಈ ಮಸೂದೆ ಪ್ರಸ್ತಾವಿಸಿದೆ.
ಮಸೂದೆಯನ್ನು ಸಂಬಂಧಿಸಿದವರೊಂದಿಗೆ ಸಮಾಲೋಚನೆಗಾಗಿ ಶಾಸಕರ ಆಯ್ಕೆ ಸಮಿತಿಗೆ ಸಲ್ಲಿಸಲಾಗಿದೆ.
ಈ ಮಸೂದೆಯು ಸಾಂವಿಧಾನಿಕ ಮೌಲ್ಯಗಳಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ ಮತ್ತು ಜಾತ್ಯತೀತ ಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ಟೀಕಾಕಾರರು,ಅದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಪ್ರತಿಗಾಮಿ ನಡೆಯಾಗಿದೆ ಎಂದು ವಾದಿಸಿದ್ದಾರೆ.







