ಛತ್ ಪೂಜೆಗಾಗಿ ಪ್ರಧಾನಿಗೆ ‘ನಕಲಿ’ ಯಮುನಾ ಘಾಟ್ ನಿರ್ಮಾಣ: ಎಎಪಿ ಆರೋಪ

PC | PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕಾಗಿ ಫಿಲ್ಟರ್ ಮಾಡಿದ ನೀರಿನಿಂದ ‘ನಕಲಿ’ ಯಮುನಾ ಘಾಟ್ ನಿರ್ಮಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ)ವು ರವಿವಾರ ಆರೋಪಿಸಿದ್ದು, ಬಿಜೆಪಿಯು ಈ ಆರೋಪಗಳನ್ನು ತಳ್ಳಿಹಾಕಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ದಿಲ್ಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು, “ಪ್ರಧಾನಿಗೆ ವಿಶಿಷ್ಟ ಘಾಟ್ ನಿರ್ಮಿಸಲು ವಜೀರಾಬಾದ್ ಜಲ ಸಂಸ್ಕರಣಾ ಘಟಕದ ಪೈಪ್ಲೈನ್ನಿಂದ ಫಿಲ್ಟರ್ ಮಾಡಿದ ನೀರನ್ನು ತಂದು ತುಂಬಲಾಗಿದೆ. ಆದರೆ ಸಾಮಾನ್ಯ ಭಕ್ತರು ವಿಷಕಾರಿಯೂ ಕಲುಷಿತವೂ ಆದ ಯಮುನಾ ನದಿಯಲ್ಲೇ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ,” ಎಂದು ಆರೋಪಿಸಿದ್ದಾರೆ.
“ಬಿಹಾರದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ದಿಲ್ಲಿಯ ಲಕ್ಷಾಂತರ ಪೂರ್ವಾಂಚಲಿಗಳ ಭಾವನೆಗಳ ಜೊತೆ ಆಟವಾಡುತ್ತಿದೆ. ಮತದಾರರನ್ನು ವಂಚಿಸಲು ಹಾಗೂ ಯಮುನಾ ಮಾಲಿನ್ಯದ ನೈಜ ಸತ್ಯವನ್ನು ಮರೆಮಾಚಲು ಈ ನಾಟಕ ರೂಪಿಸಲಾಗಿದೆ,” ಎಂದು ಅವರು ಟೀಕಿಸಿದ್ದಾರೆ.
ಯಮುನಾ ನದಿಯಲ್ಲಿ ನೊರೆ ಕುರಿತು ಮಾತನಾಡಿದ ಭಾರದ್ವಾಜ್ ಅವರು, “ಹಿಂದೆ ಎಎಪಿ ಸರ್ಕಾರದ ವಿರುದ್ಧ ವಿಷದ ನೊರೆ ಕುರಿತು ಆರೋಪ ಮಾಡುತ್ತಿದ್ದ ದಿಲ್ಲಿಯ ಜಲ ಸಚಿವ ಪರ್ವೇಶ್ ವರ್ಮಾ, ಈಗ ಅದೇ ರಾಸಾಯನಿಕವನ್ನು ನದಿಗೆ ಸಿಂಪಡಿಸುತ್ತಿದ್ದಾರೆ. ಬಿಜೆಪಿ ಒಂದು ಸುಳ್ಳು ಮುಚ್ಚಲು ಸಾವಿರ ಸುಳ್ಳು ಹೇಳುತ್ತಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ, “ಎಎಪಿಯ ಆರೋಪಗಳು ರಾಜಕೀಯ ಹತಾಶೆಯ ನಾಚಿಕೆಗೇಡಿನ ಮಾದರಿ. ಸರ್ಕಾರ ಯಮುನಾ ದಡದಲ್ಲಿನ ವಾಸುದೇವ್ ಘಾಟ್ ಅನ್ನು ಸ್ವಚ್ಛಗೊಳಿಸಿ ಭಕ್ತರಿಗೆ ಶುದ್ಧ ನೀರು ಲಭ್ಯವಾಗುವಂತೆ ಕ್ರಮ ಕೈಗೊಂಡಿದೆ. ಅದನ್ನು ವಿರೋಧಿಸುವುದು ಎಎಪಿಯ ದ್ವಂದ್ವ ನೀತಿಯನ್ನು ತೋರಿಸುತ್ತದೆ,” ಎಂದು ಪ್ರತಿಕ್ರಿಯಿಸಿದ್ದಾರೆ.
“ಸೌರಭ್ ಭಾರದ್ವಾಜ್ ಬಿಡುಗಡೆ ಮಾಡಿದ ವೀಡಿಯೋ ಒಂದು ರಾಜಕೀಯ ನಾಟಕವಷ್ಟೇ. ಹಿಂದಿನ ಕೇಜ್ರಿವಾಲ್ ಸರ್ಕಾರವು 2018 ರಿಂದ 2024ರವರೆಗೆ ಛತ್ ಪೂಜೆಯನ್ನು ಯಮುನಾ ದಡದಲ್ಲಿ ನಿಷೇಧಿಸಿತ್ತು. ಆದರೆ ರೇಖಾ ಗುಪ್ತಾ ಸರ್ಕಾರ ಕೇವಲ ಎಂಟು ತಿಂಗಳಲ್ಲಿ ಯಮುನಾದ ಮೂಲಭೂತ ಶುದ್ಧೀಕರಣ ಪೂರ್ಣಗೊಳಿಸಿ, ಭಕ್ತರಿಗೆ ನೈಸರ್ಗಿಕ ಘಾಟ್ಗಳಲ್ಲಿ ಪೂಜೆ ಮಾಡಲು ಅವಕಾಶ ಕಲ್ಪಿಸಿದೆ,” ಎಂದು ಸಚ್ ದೇವ ಹೇಳಿದ್ದಾರೆ.







