ಆಪ್ ನ 7 ಅಭ್ಯರ್ಥಿಗಳಿಗೆ ಬಿಜೆಪಿಯಿಂದ 15 ಕೋಟಿ ರೂ. ಆಮಿಷ: ಸಂಜಯ್ ಸಿಂಗ್

Photo - PTI
ಹೊಸದಿಲ್ಲಿ: ದಿಲ್ಲಿ ವಿಧಾನ ಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗುವ ಮುನ್ನವೇ ಬಿಜೆಪಿ ಆಮ್ ಆದ್ಮಿ ಪಕ್ಷದ ಏಳು ಅಭ್ಯರ್ಥಿಗಳಿಗೆ ತಲಾ 15 ಕೋಟಿ ರೂ. ಆಮಿಷ ಒಡ್ಡಿದೆ ಎಂದು ಆಪ್ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಗುರುವಾರ ಆರೋಪಿಸಿದ್ದಾರೆ.
ಈ ಆರೋಪದ ಕುರಿತಂತೆ ಬಿಜೆಪಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ 7 ಶಾಸಕರಿಗೆ ಬಿಜೆಪಿ ಕರೆ ಮಾಡಿದೆ ಹಾಗೂ ಬಿಜೆಪಿಗೆ ಸೇರಿದರೆ ತಲಾ 15 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದೆ ಎಂದು ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
‘‘ಕೆಲವರಿಗೆ ಮುಖಾಮುಖಿ ಭೇಟಿಯಾಗುವಂತೆ ತಿಳಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ. ಇದು ಫಲಿತಾಂಶದ ಮುನ್ನವೇ ಬಿಜೆಪಿ ಸೋಲನ್ನು ಒಪ್ಪಿಕೊಂಡಿರುವುದನ್ನು ಸ್ಪಷ್ಟವಾಗಿ ತೋರಿಸಿದೆ. ಅಲ್ಲದೆ, ಸೋಲುವ ಕಾರಣಕ್ಕಾಗಿಯೇ ಅದು ಈ ರೀತಿ ಅಡ್ಡ ದಾರಿಯಲ್ಲಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಅಂತಹ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವಂತೆ ಹಾಗೂ ಅವರು ಯಾವುದೇ ಮುಖಾಮುಖಿ ಭೇಟಿಗೆ ಆಹ್ವಾನ ನೀಡಿದರೆ, ಅದನ್ನು ದಾಖಲಿಸಿಕೊಳ್ಳಲು ಸ್ಪೈ ಕೆಮರಾ ಬಳಸುವಂತೆ ಪಕ್ಷ ಅವರಿಗೆ ಸಲಹೆ ನೀಡಿದೆ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ದಿಲ್ಲಿಯ 70 ವಿಧಾನ ಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಚುನಾವಣೆ ನಡೆದಿದೆ. ಫೆ. 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28







