ಆಪ್ ಶಾಸಕ ಜಸ್ವಂತ್ ಸಿಂಗ್ ಗಜ್ಜಾನ್ ಮಾಜ್ರಾ ಬಂಧನ
ಹಣ ಅಕ್ರಮ ವರ್ಗಾವಣೆ ಪ್ರಕರಣ
Photo: aamaadmiparty.org
ಚಂಡಿಗಢ: ಬ್ಯಾಂಕ್ ವಂಚನೆ ಆರೋಪದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸೋಮವಾರ ಪಂಜಾಬ್ನ ಆಪ್ ಶಾಸಕ ಜಸ್ವಂತ್ ಸಿಂಗ್ ಗಜ್ಜಾನ್ ಮಾಜ್ರಾನನ್ನು ಸೋಮವಾರ ಬಂಧಿಸಿದೆ.
ಮಾಲೇರ್ಕೋಟ್ಲಾದಲ್ಲಿ ಸಾರ್ವಜನಿಕ ಸಭೆಯ ಸಂದರ್ಭ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ನಿಮಯಗಳ ಅಡಿಯಲ್ಲಿ ಜಸ್ವಂತ್ ಸಿಂಗ್ ಗಜ್ಜಾನ್ ಮಾಜ್ರಾನನ್ನು ಬಂಧಿಸಿದ್ದಾರೆ.
ಈ ಹಿಂದೆ ಗಜ್ಜಾನ್ ಮಾಜ್ರಾ ಹಲವು ಸಮನ್ಸ್ಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮಾಜ್ರಾನನ್ನು ವಶಕ್ಕೆ ತೆಗೆದುಕೊಂಡಿದೆ ಹಾಗೂ ಅನಂತರ ಬಂಧಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ನ ಆಪ್ನ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, ಗಜ್ಜಾನ್ ಮಾಜ್ರಾ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡಿರುವ ರೀತಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಬಿಜೆಪಿ ತಂತ್ರವನ್ನು ಪ್ರತಿಬಿಂಬಿಸಿದೆ ಎಂದಿದ್ದಾರೆ. ಆಪ್ ಸೇರುವ ಮೊದಲೇ ಅವರು ಈ ಪ್ರಕರಣವನ್ನು ಎದುರಿಸುತ್ತಿದ್ದರು ಎಂದು ಕೂಡ ಅವರು ಉಲ್ಲೇಖಿಸಿದ್ದಾರೆ.
40 ಕೋ.ರೂ. ಮೊತ್ತದ ಬ್ಯಾಂಕ್ ವಂಚನೆ ಆರೋಪಕ್ಕೆ ಸಂಬಂಧಿಸಿ ಗಜ್ಜಾನ್ ಮಾಜ್ರಾನಿಗೆ ಸಂಬಂಧಿಸಿದ ಸೊತ್ತುಗಳ ಮೇಲೆ ಸಿಬಿಐ ಕಳೆದ ವರ್ಷ ಮೇ ನಲ್ಲಿ ದಾಳಿ ನಡೆಸಿತ್ತು.