ಮುಂಬೈ | ಅನಾಥಾಶ್ರಮದ ಬಳಿ ಬುಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ
ಶಿಶುವಿನ ಬಳಿಯಿದ್ದ ಇಂಗ್ಲಿಷ್ನಲ್ಲಿ ಬರೆದ ಪತ್ರ!

Photo | hindustantimes
ಮುಂಬೈ : ಪನ್ವೇಲ್ನ ಟಕ್ಕಾ ಪ್ರದೇಶದಲ್ಲಿ ಬಾಲಕಿಯರ ಅನಾಥಾಶ್ರಮದ ಹೊರಗೆ ಎರಡು ದಿನಗಳ ನವಜಾತ ಹೆಣ್ಣು ಶಿಶುವನ್ನು ಬುಟ್ಟಿಯಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಶಿಶುವಿನ ಜೊತೆಗೆ ಬಾಟಲಿ, ಹಾಲಿನ ಪುಡಿಯ ಪ್ಯಾಕೆಟ್ ಮತ್ತು ಪತ್ರವೊಂದು ಪತ್ತೆಯಾಗಿದೆ. ನವಜಾತ ಶಿಶು ಈಗ ಸುರಕ್ಷಿತವಾಗಿದೆ ಮತ್ತು ವೈದ್ಯರ ಆರೈಕೆಯಲ್ಲಿದೆ ಎಂದು ತಿಳಿದು ಬಂದಿದೆ.
ಮಗುವಿನ ಜೊತೆಗೆ ಸಿಕ್ಕಿದ ಇಂಗ್ಲಿಷ್ನಲ್ಲಿ ಬರೆದಿರುವ ಪತ್ರದಲ್ಲಿ ʼಮಾನಸಿಕ ಮತ್ತು ಆರ್ಥಿಕʼಸಂಕಷ್ಟದಿಂದಾಗಿ ಮಗುವನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ, ಕ್ಷಮಿಸಿ ಎಂದು ಬರೆಯಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ರೇಣು, ಬೆಳಿಗ್ಗೆ 6:30ರ ಸುಮಾರಿಗೆ ಅನಾಥಾಶ್ರಮದ ಬಳಿ ಅಳುವ ಶಬ್ಧ ಕೇಳಿ ಬಂತು. ನಾವು ಬೆಕ್ಕಿನ ಮರಿ ಅಥವಾ ನಾಯಿಮರಿ ಅಳುತ್ತಿದೆ ಎಂದು ಭಾವಿಸಿದ್ದೆವು. ಆದರೆ, ನಾವು ಅದರ ಬಳಿ ಹೋದಾಗ ದಿಗ್ಭ್ರಮೆಗೊಂಡೆವು. ನವಜಾತ ಶಿಶು, ಹಸಿವು ಮತ್ತು ಚಳಿಯಿಂದ ನಡುಗುತ್ತಿತ್ತು. ನಾನು ಅದಕ್ಕೆ ಹಾಲು ಕುಡಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದೆ ಎಂದು ಹೇಳಿದ್ದಾರೆ.
ಶಿಶುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ʼಶಿಶುವಿನ ಪೋಷಕರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಯಾರಾದರೂ ಬುಟ್ಟಿಯನ್ನು ಬಿಟ್ಟು ಹೋಗುವುದನ್ನು ನೋಡಿದ್ದೀರಾ ಎಂದು ನಾವು ಸ್ಥಳೀಯರನ್ನು ವಿಚಾರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನವಜಾತ ಶಿಶುವನ್ನು ತ್ಯಜಿಸುವುದು ಕಾನೂನುಬಾಹಿರ ಮಾತ್ರವಲ್ಲ, ಅತ್ಯಂತ ಅಪಾಯಕಾರಿಯೂ ಆಗಿದೆʼ ಎಂದು ಪೊಲೀಸ್ ಇನ್ಸ್ಪೆಕ್ಟರ್ ನಿತಿನ್ ಠಾಕರೆ ತಿಳಿಸಿದ್ದಾರೆ.
ಹೆಚ್ಚಿನ ಆರೈಕೆಗಾಗಿ ಮಗುವನ್ನು ಅಲಿಬಾಗ್ನಲ್ಲಿರುವ ಮಕ್ಕಳ ಚಿಕಿತ್ಸಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಮಕ್ಕಳ ಕಲ್ಯಾಣಾಧಿಕಾರಿಗಳು ಹೇಳಿದ್ದಾರೆ.







