ದ್ವೇಷ ಭಾಷಣ ಪ್ರಕರಣ | ಅಬ್ಬಾಸ್ ಅನ್ಸಾರಿಗೆ 2 ವರ್ಷಗಳ ಕಾರಾಗೃಹ ಶಿಕ್ಷೆ

ಅಬ್ಬಾಸ್ ಅನ್ಸಾರಿ | PC : PTI
ಲಕ್ನೋ: 2022ರ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯ ಸಂದರ್ಭ ದಾಖಲಿಸಲಾದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ರಾಜಕಾರಣಿಯಾಗಿ ಬದಲಾದ ಭೂಗತಪಾತಕಿ ದಿವಂಗತ ಮುಖ್ತರ್ ಅನ್ಸಾರಿ ಅವರ ಪುತ್ರ ಹಾಗೂ ಮವು ಸದರ್ನ ಶಾಸಕ ಅಬ್ಬಾಸ್ ಅನ್ಸಾರಿಯನ್ನು ಪೂರ್ವ ಉತ್ತರಪ್ರದೇಶದ ಮವು ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಶನಿವಾರ ದೋಷಿ ಎಂದು ಪ್ರಕಟಿಸಿದೆ.
ನ್ಯಾಯಾಲಯ ಅಬ್ಬಾಸ್ ಅನ್ಸಾರಿ ಅವರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಇದರಿಂದ ಅವರು ವಿಧಾನ ಸಭೆಯ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ವಿವಾದಾತ್ಮಕ ಭಾಷಣದ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಬ್ಬಾಸ್ ಅನ್ಸಾರಿ ಅವರ ಚುನಾವಣಾ ಏಜೆಂಟ್ ಮನ್ಸೂರ್ ಅನ್ಸಾರಿ ಅವರನ್ನು ಕೂಡ ಈ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಪರಿಗಣಿಸಿದೆ. ಅಲ್ಲದೆ, ಅವರಿಗೆ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಈ ನಡುವೆ, ಸಾರ್ವಜನಿಕ ಸಭೆಯ ಸ್ಥಳದಲ್ಲಿ ಉಪಸ್ಥಿತರಿದ್ದ ಅಬ್ಬಾಸ್ ಅನ್ಸಾರಿ ಅವರ ಕಿರಿಯ ಸಹೋದರ ಉಮರ್ ಅನ್ಸಾರಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಬ್ಬಾಸ್ ಅನ್ಸಾರಿ ಹಾಗೂ ಮನ್ಸೂರ್ ಅನ್ಸಾರಿ ಅವರು ತಲಾ 20 ಸಾವಿರ ರೂ.ನ ಜಾಮೀನು ಬಾಂಡ್ ಸಲ್ಲಿಸಿದ್ದಾರೆ ಹಾಗೂ ಜಾಮೀನು ಪಡೆದುಕೊಂಡಿದ್ದಾರೆ ಎಂದು ಅಬ್ಬಾಸ್ ಅನ್ಸಾರಿ ಅವರ ನ್ಯಾಯವಾದಿ ದರೋಗಾ ಸಿಂಗ್ ತಿಳಿಸಿದ್ದಾರೆ.
ಚುನಾವಣಾ ಭಾಷಣದಲ್ಲಿ ಅಬ್ಬಾಸ್ ಅನ್ಸಾರಿ ಅವರು ಸಮಾಜವಾದಿ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರದ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.







